ಆ. 31ರಂದು ಉಡುಪಿಯಲ್ಲಿ ಸಾಂಪ್ರದಾಯಿಕ ಮೊಸರು ಕುಡಿಕೆ; ಅರ್ಘ್ಯ ಪ್ರದಾನ ಮಾಡಿದ ಅದಮಾರುಶ್ರೀ

ಉಡುಪಿ, ಆ.30: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ಸಾಂಪ್ರದಾಯಿಕ ರೀತಿಯಲ್ಲಿ ಸರಳವಾಗಿ ನಡೆದಿದ್ದು, ಮಧ್ಯರಾತ್ರಿ 12:15ಕ್ಕೆ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು.
ಉಡುಪಿಯಲ್ಲಿರುವ ಉಳಿದ ಸ್ವಾಮೀಜಿಗಳು ಅವರಿಗೆ ಜೊತೆ ನೀಡಿದರು. ಬಳಿಕ ಮಠದ ಎರಡು ಕಡೆಗಳಲ್ಲಿ ಭಕ್ತರು ಹಾಗೂ ಸಾರ್ವಜನಿಕರಿಗೆ ಅರ್ಘ್ಯ ಪ್ರದಾನಕ್ಕೆ ಅವಕಾಶ ಮಾಡಿಕೊಡ ಲಾಯಿತು.
ಕೊರೋn ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಸಾರ್ವಜನಿಕ ವಾದ ಆಚರಣೆಗೆ ಅವಕಾಶವಿಲ್ಲದ ಕಾರಣ ಈ ಬಾರಿಯೂ ಕೃಷ್ಣ ಮಠ ಸರಳವಾದ ಜನ್ಮಾಷ್ಟಮಿ ಕಾರ್ಯಕ್ರಮ ಹಮ್ಮಿಕೊಂಡಿದ್ದರೆ ನಾಳೆ ಶ್ರೀಕೃಷ್ಣ ಲೀಲೋತ್ಸವ ಆಚರಣೆ ಸಹ ಸಾಂಪ್ರದಾಯಿಕ ರೀತಿಯಲ್ಲಿ ನಡೆಯಲಿದೆ.
ಇಂದು ಬೆಳಗ್ಗೆ ಮಹಾಪೂಜೆಗೆ ಮೊದಲು ಪರ್ಯಾಯ ಶ್ರೀಈಶಪ್ರಿಯ ತೀರ್ಥರು ಕೃಷ್ಣ ದೇವರಿಗೆ ಲಕ್ಷ ತುಳಸಿ ಅರ್ಚನೆ ಮಾಡಿದರು. ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭತೀರ್ಥ ಸ್ವಾಮೀಜಿ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣನಿಗೆ ಬಾಲಕೃಷ್ಣನ ಅಲಂಕಾರ ಮಾಡಿದರು. ಇಂದು ಮಠದ ಮಧ್ವಮಂಟಪ ಹಾಗೂ ಸೂರ್ಯಶಾಲೆಯಲ್ಲಿ ಸ್ಯಾಕ್ಸೋಫೋನ್, ನಾಗಸ್ವರ, ಶಹನಾಯಿ ಮತ್ತು ಕೊಳಲು ವಾದನ ಕಚೇರಿಗಳು ನಡೆದವು.
ಮಹಾಪೂಜೆಯ ಬಳಿಕ ರಾತ್ರಿ ಪೂಜೆಗಾಗಿ ಉಂಡೆ ಕಟ್ಟುವುದಕ್ಕೆ ಪರ್ಯಾಯ ಶ್ರೀಗಳು ಚಾಲನೆ ನೀಡಿದರು. ಇವರೊಂದಿಗೆ ಅದಮಾರು ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ ಸಹ ಉಂಡೆ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಿದರು.
ಶ್ರೀಕೃಷ್ಣ ಮಠವನ್ನು ಬಗೆಬಗೆಯ ಬಣ್ಣಗಳ, ಆಕಾರದ ಹೂವುಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿತ್ತು. ಇಂದು ಇಡೀ ದಿನ ದೇವರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಅಷ್ಟಮಿ ಪ್ರಯುಕ್ತ ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಲು 40 ಸಾವಿರ ಚಕ್ಕುಲಿ ಮತ್ತು 80 ಸಾವಿರ ಉಂಡೆಗಳನ್ನು ತಯಾರಿಸಿ ಹಂಚಲು ಸಿದ್ಧವಾಗಿ ಇಡಲಾಗಿದೆ. ಅನ್ನಬ್ರಹ್ಮದಲ್ಲಿ 50ಕ್ಕೂ ಅಧಿಕ ಬಾಣಸಿಗರು ಚಕ್ಕುಲಿ, ಗುಂಡಿಟ್ಟು ಲಾಡು, ಅರಳುಂಡೆ, ನೆಲಕಡ್ಲೆ ಲಾಡು, ಹೆಸರಿಟ್ಟು ಲಾಡು, ಕಡ್ಲೆ ಹಾಗೂ ಎಳ್ಳು ಉಂಡೆ, ಶುಂಠಿ, ಗೋಡಂಬಿ ಲಾಡು ತಯಾರಿಸಿದರು.
ಮಂಗಳವಾರದ ಶ್ರೀಕೃಷ್ಣ ಲೀಲೋತ್ಸವದ ವೇಳೆ ಬಳಸುವ ಮೊಸರು ಕುಡಿಕೆಯ ಮಡಿಕೆಗಳಿಗೆ ಬ್ರಹ್ಮಾವರದ ಮಂಜುನಾಥ ಆಚಾರ್ಯ ಎಂದು ಸಂಗಡಿಗರು ಚಿತ್ರ, ರಂಗವಲ್ಲಿ ಬಿಡಿಸಿ ಸಿದ್ಧಪಡಿಸಿದರು. ಅಷ್ಟಮಿ ಹಬ್ಬದ ಸಂದರ್ಭದಲ್ಲಿ ಒಳ್ಳೆಯ ವ್ಯಾಪಾರವನ್ನು ನಿರೀಕ್ಷಿಸಿ ಹಾಸನ, ಚಿಕ್ಕಮಗಳೂರು ಸೇರಿದಂತೆ ಅನೇಕ ಜಿಲ್ಲೆಗಳಿಂದ ಬಂದಿದ್ದ ಹೂವಿನ ವ್ಯಾಪಾರಿಗಳು ಭಾರೀ ಮಳೆಯಿಂದಾಗಿ ನಿರಾಶೆ ಅನುಭವಿಸಿದರು. ಕೋವಿಡ್ ಕಾರಣದಿಂದ ರಥಬೀದಿಯಲ್ಲಿ ಜನ ಸಂಚಾರ ವಿರಳವಾಗಿದ್ದು, ಇದರೊಂದಿಗೆ ಸುರಿಯುತ್ತಿರುವ ಮಳೆಯೂ ಅವರ ನಿರೀಕ್ಷೆಗೆ ತಣ್ಣೀರೆರಚಿದೆ.
ನಾಳೆ ವಿಟ್ಲಪಿಂಡಿಗಾಗಿ ಮಠದ ಮುಂಭಾಗ ಹಾಗೂ ರಥಬೀದಿಯ ಸುತ್ತಲೂ ಗುರ್ಜಿಗಳನ್ನು ನಿರ್ಮಿಸಲಾಗಿದೆ. ಜನ್ಮಾಷ್ಟಮಿಯ ಪ್ರಮುಖ ಆಕರ್ಷಣೆಯಾದ ಈ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮ ಈ ಬಾರಿ ಸಾಂಕೇತಿಕವಾಗಿ ನಡೆಯಲಿದೆ. ಇದರಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿಲ್ಲ. ಕೇವಲ ಮಠದ ಸಿಬ್ಬಂದಿಗಳು ಹಾಗೂ ಮೊಸರು ಕುಡಿಕೆಗಳನ್ನು ಒಡೆಯುವ ಗೋಪಾಲಕರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.
ಮಂಗಳವಾರ ಬೆಳಗ್ಗೆ 7:30ರಿಂದ ಮಧ್ಯಾಹ್ನ 1:00ರವರೆಗೆ, ಬಳಿಕ ಸಂಜೆ 5:00ರಿಂದ ಕೃಷ್ಣ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸುರಕ್ಷಿತಾ ಅಂತರವನ್ನು ಪಾಲಿಸಿ, ಸರಕಾರದ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ದೇವರ ದರ್ಶನ ಪಡೆಯಬಹುದು ಎಂದು ಶ್ರೀಮಠದ ಪ್ರಕಟನೆ ತಿಳಿಸಿದೆ.










