ಫಿರೋಝಾಬಾದ್ ನಲ್ಲಿ ಡೆಂಗ್ಯುಗೆ 40 ಮಕ್ಕಳು ಬಲಿ ಎಂಬ ಬಿಜೆಪಿ ಶಾಸಕನ ಹೇಳಿಕೆಗೆ ಉ.ಪ್ರ.ಸರಕಾರದ ತಿರಸ್ಕಾರ

ಸಾಂದರ್ಭಿಕ ಚಿತ್ರ
ಫಿರೋಝಾಬಾದ್,ಆ.30: ಕಳೆದೊಂದು ವಾರದಲ್ಲಿ ಉತ್ತರ ಪ್ರದೇಶದ ಫಿರೋಝಾಬಾದ್ ಜಿಲ್ಲೆಯಲ್ಲಿ 40ಕ್ಕೂ ಅಧಿಕ ಮಕ್ಕಳು ಡೆಂಗ್ಯುಗೆ ಬಲಿಯಾಗಿದ್ದಾರೆ ಮತ್ತು ಈ ದುರಂತಕ್ಕೆ ರಾಜ್ಯ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಪೌರ ಸಂಸ್ಥೆ ಹೊಣೆಯಾಗಿವೆ ಎಂಬ ಬಿಜೆಪಿ ಶಾಸಕ ಮನೀಷ್ ಅಸಿಜಾ ಅವರ ಹೇಳಿಕೆಯನ್ನು ರಾಜ್ಯ ಸರಕಾರವು ನಿರಾಕರಿಸಿದೆ.
ಅಸಿಜಾ ಅವರ ಹೇಳಿಕೆಗಳು ತಪ್ಪಾಗಿವೆ ಮತ್ತು ಇಂತಹ ಯಾವುದೇ ಸಾವುಗಳು ವರದಿಯಾಗಿಲ್ಲ ಎಂದು ಉ.ಪ್ರ.ಆರೋಗ್ಯ ಸಚಿವ ಜೈಪ್ರತಾಪ ಸಿಂಗ ಅವರು ಹೇಳಿದರು.
ರವಿವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದ ಅಸಿಜಾ,ಆ.22-23ರಿಂದ ಫಿರೋಝಾಬಾದ್ ನಲ್ಲಿ ಡೆಂಗ್ಯುನಿಂದ 40ಕ್ಕೂ ಅಧಿಕ ಮಕ್ಕಳು ಮೃತಪಟ್ಟಿದ್ದಾರೆ. ಆರು ಮಕ್ಕಳು ಸಾವನ್ನಪ್ಪಿರುವ ದುಃಖದ ಸುದ್ದಿ ಇಂದು ಬೆಳಿಗ್ಗೆ ತನಗೆ ತಲುಪಿದೆ. ಮೃತ ಮಕ್ಕಳಲ್ಲಿ ಹೆಚ್ಚಿನವರು 4ರಿಂದ 15ವರ್ಷ ವಯೋಮಾನದವರು ಎಂದು ಹೇಳಿದ್ದರು.
ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಲು ಮಹಾನಗರ ಪಾಲಿಕೆಯು ಸಕಾಲದಲ್ಲಿ ಕ್ರಮಗಳನ್ನು ಕೈಗೊಂಡಿಲ್ಲ ಎಂದು ವೀಡಿಯೊವೊಂದರಲ್ಲಿ ದೂರಿದ್ದ ಅಸಿಜಾ,ಮಕ್ಕಳು ಡೆಂಗ್ಯುಗೆ ಬಲಿಯಾದ ಪ್ರದೇಶಗಳು ಕೊಳಚೆಯಿಂದ ಕೂಡಿದ್ದು ಎಲ್ಲೆಡೆ ನೀರು ನಿಂತಿದೆ. ಸೊಳ್ಳೆಗಳು ಎಲ್ಲ ಕಡೆಯೂ ಉತ್ಪತ್ತಿಯಾಗುತ್ತಿವೆ. ಸರಕಾರವು ಸ್ವಚ್ಛತಾ ಕಾರ್ಯಕ್ಕಾಗಿ ಮಹಾನಗರ ಪಾಲಿಕೆಗೆ 50 ವಾಹನಗಳನ್ನು ನೀಡಿದೆ. ಆದರೆ ಕಳೆದ ನಾಲ್ಕು ತಿಂಗಳು ಈ ವಾಹನಗಳು ನಿಂತಲ್ಲಿಯೇ ನಿಂತಿದ್ದು,ಶನಿವಾರ ಮೊದಲ ಬಾರಿಗೆ ಬಳಕೆಯಾಗಿವೆ ಎಂದು ಹೇಳಿದ್ದರು.







