ಮಂಗಳೂರು ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ ಆರೋಪ: ತನಿಖೆಗೆ ಸಿಂಡಿಕೇಟ್ ಸದಸ್ಯರಿಂದ ಸಚಿವರಿಗೆ ಮನವಿ

ಮಂಗಳೂರು, ಆ.30: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಿಂಡಿಕೇಟ್ ನಿಂದ ರಚಿಸಲ್ಪಟ್ಟ ಸಮಿತಿ ಮಧ್ಯಂತರ ವರದಿ ಸಲ್ಲಿಸಿದೆ. ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ವಿವಿ ಸಿಂಡಿಕೇಟ್ ಸದಸ್ಯರು ಮನವಿ ಸಲ್ಲಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈ ಹಿಂದಿನ ಅವಧಿಯಲ್ಲಿ ಮಂಗಳೂರು ವಿವಿ ಕ್ಯಾಂಪಸ್, ಮಂಗಳೂರು ವಿವಿ ಕಾಲೇಜು ಮತ್ತು ಮಂಗಳೂರು ವಿವಿ ಸ್ನಾತಕೋತ್ತರ ಕೇಂದ್ರ ಚಿಕ್ಕ ಅಳವಾರದಲ್ಲಿ ಸಿಸಿಟಿವಿ ಹಾಗೂ ಬಯೋಮೆಟ್ರಿಕ್‌ನ್ನು ಎರಡು ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾಗಿತ್ತು. ಇದರಲ್ಲಿ ಭ್ರಷ್ಟಚಾರ ನಡೆದಿದೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಂಡಿಕೇಟ್ ಇದನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿತು.
ಸಮಿತಿಯು ಕಡತ, ಸಿಸಿಟಿವಿ ಕ್ಯಾಮೆರಾ ಹಾಗೂ ಬಯೋಮೆಟ್ರಿಕ್ ಉಪಕರಣಗಳನ್ನು ಪರಿಶೀಲಿಸಿ ವಿವರವಾದ ವರದಿಯನ್ನು ಸಲ್ಲಿಸಿದೆ. ಇದರಲ್ಲಿ ಲೋಪದೋಷಗಳು ಕಂಡು ಬಂದಿದ್ದು, ಈ ಹಿಂದಿನ ಕುಲಪತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹೆಚ್ಚಿನ ತನಿಖೆ ನಡೆಸಬೇಕೆಂದು ಸಿಂಡಿಕೇಟಿಗೆ ಮಧ್ಯಂತರ ವರದಿ ನೀಡಿದೆ.
ಮಂಗಳೂರು ವಿವಿ ಕೇಂದ್ರದಲ್ಲಿ ಅಳವಡಿಸಲಾಗಿರುವ ಮೇಲ್ಛಾವಣಿ ಸೋಲಾರಿನ ಕುರಿತಂತೆಯು ಸಿಂಡಿಕೇಟ್ ರಚಿಸಿರುವ ಸಮಿತಿಯ ಕಡತ, ಸೋಲಾರು ಅಳವಡಿಸಿರುವ ಸ್ಥಳ ಹಾಗೂ ಅದರ ಉಪಯೋಗದ ಸಂಪೂರ್ಣವಾಗಿರುವ ಮಧ್ಯಂತರ ವರದಿಯನ್ನು ಸಿಂಡಿಕೇಟಿಗೆ ಸಲ್ಲಿಸಿತು. ಇದನ್ನು ಎರಡು ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಅಳವಡಿಸಲಾಗಿದೆ. ಇದರಿಂದ ವಿವಿಗೆ ಯಾವುದೇ ಉಪಯೋಗವಾಗಿಲ್ಲ. ಈ ವರದಿಯಲ್ಲಿ ಈ ಹಿಂದಿನ ಕುಲಪತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹೆಚ್ಚಿನ ತನಿಖೆ ನಡೆಸಬೇಕೆಂದು ಸಿಂಡಿಕೇಟ್ ಸದಸ್ಯರು ಸಚಿವರಲ್ಲಿ ಮನವಿ ಮಾಡಿದರು.
ಈ ವರದಿಯನ್ನು ಆಧರಿಸಿ ಸಿಂಡಿಕೇಟ್ ಸಭೆಯು ಗೌರವಾನ್ವಿತ ಕುಲಾಧಿಪತಿ ರಾಜ್ಯಪಾಲರ ಅನುಮತಿ ಕೋರಿತು. ರಾಜ್ಯಪಾಲರು ವಿವಿಗೆ ಪತ್ರ ಬರೆದು ಸರಕಾರದ ಹಂತದಲ್ಲಿ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ನಂತರ ಸಿಂಡಿಕೇಟ್ ಸಹ ಕುಲಾಧಿಪತಿಯಾದ ತಮ್ಮಲ್ಲಿ ಇದರ ಕುರಿತಂತೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಸರ್ವಾನುಮತದ ತೀರ್ಮಾನವನ್ನು ಕೈಗೊಂಡಿದೆ. ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಿರುವ ಈ ಹಿಂದಿನ ವಿವಿಯ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಬೇಕು. ನಿವೃತ್ತ ನ್ಯಾಯಾಧೀಶರನ್ನು ಕೂಡಲೇ ನೇಮಿಸಿ, ತನಿಖೆ ನಡೆಸಬೇಕೆಂದು ಎಂದು ವಿವಿ ಸಿಂಡಿಕೇಟ್ ಸದಸ್ಯರು ಸಚಿವರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಸರಕಾರದ ಹಂತದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿಂಡಿಕೇಟ್ ಸದಸ್ಯ ರಾದ ರಮೇಶ ಕೆ., ರವಿಚಂದ್ರ ಸಿ.ಎಂ, ರವೀಂದ್ರನಾಥ ರೈ, ಕರುಣಾಕರ ಕೋಟೆಕಾರ್, ಮೋಹನ್ ಪಡಿವಾಲ್, ಪ್ರಮುಖ ವಕೀಲರಾದ ಸುವೃತ್ ಕುಮಾರ್ , ರವಿ ಮಂಡ್ಯ, ಆದಿತ್ಯ ಶೆಟ್ಟಿ ಉಪಸ್ಥಿತರಿದ್ದರು.







