ಉ.ಕೊರಿಯಾದ ಪರಮಾಣು ಕಾರ್ಯಕ್ರಮ ಆತಂಕಕಾರಿ: ವಿಶ್ವಸಂಸ್ಥೆ ಪರಮಾಣು ಕಾರ್ಯಪಡೆ ವರದಿ
ಪ್ರೋಂಗ್ಯಾಂಗ್, ಆ.30: ಉತ್ತರ ಕೊರಿಯಾವು ಅಣ್ವಸ್ತ್ರಗಳಿಗಾಗಿ ಪ್ಲುಟೋನಿಯಂ ಉತ್ಪಾದಿಸುವ ತನ್ನ ಪರಮಾಣು ಸ್ಥಾವರವನ್ನು ಪುನರಾರಂಭಿಸಿದ ಬಗ್ಗೆ ಮಾಹಿತಿಯಿದ್ದು , ನಿಷೇದಿಸಲಾಗಿರುವ ಅಣ್ವಸ್ತ್ರ ಯೋಜನೆಯನ್ನು ವಿಸ್ತರಿಸಿರುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ಪರಮಾಣು ಕಾರ್ಯಪಡೆಯ ವರದಿ ಹೇಳಿದೆ.
ಪರಮಾಣು ಶಸ್ತ್ರಕ್ಕೆ ಬಳಸುವ ದರ್ಜೆಯ ಪ್ಲುಟೋನಿಯಂ ಉತ್ಪಾದಿಸುವ ಸಾಮರ್ಥ್ಯದ, ಯಾಂಗ್ಬ್ಯಾನ್ ಪರಮಾಣು ಸಂಕೀರ್ಣದಲ್ಲಿರುವ 5- ಮೆಗಾವ್ಯಾಟ್ ರಿಯಾಕ್ಟರ್ ಮತ್ತೆ ಕಾರ್ಯಾರಂಭ ಮಾಡಿರುವ ಸಂಕೇತ 2018ರ ಅಂತ್ಯಭಾಗದಲ್ಲಿ ಕಂಡುಬಂದಿದೆ ಎಂದು ಇಂಟರ್ನ್ಯಾಷನಲ್ ಅಟೊಮಿಕ್ ಎನರ್ಜಿ ಏಜೆನ್ಸಿ(ಐಎಇಎ) ಶುಕ್ರವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ಉಲ್ಲೇಖಿಸಿದೆ. ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮ ಮತ್ತೆ ತೀವ್ರ ಆತಂಕ ಮೂಡಿಸಿದೆ. 2021ರ ಜುಲೈಯಲ್ಲಿ ರಿಯಾಕ್ಟರ್ನಿಂದ ಕೂಲಿಂಗ್ ವಾಟರ್ ಹೊರಬಿಡಲಾಗಿದೆ ಎಂದು ವರದಿ ಹೇಳಿದೆ.
ವಿಶ್ವಸಂಸ್ಥೆಯ ಪರಮಾಣು ಕಾರ್ಯಪಡೆಗೆ ತನ್ನ ಪರಮಾಣು ಸ್ಥಾವರ ಹಾಗೂ ರಿಯಾಕ್ಟರ್ಗಳ ಪರಿಶೀಲನೆಗೆ ಉತ್ತರಕೊರಿಯಾ 2009ರಲ್ಲಿ ಅನುಮತಿ ರದ್ದುಗೊಳಿಸಿದ್ದು ಅಂದಿನಿಂದ ಐಎಇಎ ಸೆಟಿಲೈಟ್ ಚಿತ್ರಗಳ ಆಧಾರದಲ್ಲಿ ಉತ್ತರಕೊರಿಯಾದ ಪರಮಾಣು ಕಾರ್ಯಕ್ರಮದ ಬಗ್ಗೆ ಗಮನ ಹರಿಸಿದೆ. ಯಾಂಗ್ಬ್ಯಾನ್ ಪರಮಾಣು ಶಕ್ತಿ ಸಂಕೀರ್ಣದಲ್ಲಿರುವ ಪರಮಾಣು ರಿಯಾಕ್ಟರ್ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.





