ಮಂಗಳೂರು: ಪೋಕ್ಸೊ ಪ್ರಕರಣದ ಆರೋಪಿ ಕೋರ್ಟ್ನ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ
![ಮಂಗಳೂರು: ಪೋಕ್ಸೊ ಪ್ರಕರಣದ ಆರೋಪಿ ಕೋರ್ಟ್ನ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಂಗಳೂರು: ಪೋಕ್ಸೊ ಪ್ರಕರಣದ ಆರೋಪಿ ಕೋರ್ಟ್ನ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ](https://www.varthabharati.in/sites/default/files/images/articles/2021/08/31/304730-1630431792.jpg)
ಮಂಗಳೂರು, ಆ.31: ಪೋಕ್ಸೊ ಪ್ರಕರಣದ ಆರೋಪಿಯೋರ್ವ ಮಂಗಳೂರು ನ್ಯಾಯಾಲಯದ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಘಟನೆ ಮಂಗಳವಾರ ಸಂಜೆ ವರದಿಯಾಗಿದೆ.
ಪೋಕ್ಸೊ ಪ್ರಕರಣದ ಆರೋಪಿ ತಲಪಾಡಿ ಕಿನ್ಯ ನಿವಾಸಿ ರವಿರಾಜ್ (32) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಆತ ನ್ಯಾಯಾಲಯದ ಆರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದು, ಕ್ಷಣಹೊತ್ತಲ್ಲೇ ನೆಲಕ್ಕೆ ಅಪ್ಪಳಿಸಿದ ಆರೋಪಿಯ ತಲೆಗೆ ಭಾರೀ ಪೆಟ್ಟು ಬಿದ್ದಿದ್ದು, ತಲೆಯಿಂದ ಅಧಿಕ ಪ್ರಮಾಣದ ರಕ್ತ ಸೋರಿಕೆಯಾಗಿದೆ. ಬಳಿಕ ಆತ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತೆರಳಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಯು ಪೋಕ್ಸೊ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿದ್ದ ಎಂದು ಮೂಲಗಳು ತಿಳಿಸಿವೆ.
ಆತ್ಮಹತ್ಯೆ ಬೇಡ
ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಆರೋಪಿಯು ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ತಳ್ಳಿಕೊಂಡು ಹೋಗಿ ಹಾರಿದ್ದಾನೆ. ಆರೋಪಿಗಳು ನ್ಯಾಯಾಲಯದಲ್ಲಿ ಪ್ರಕರಣವನ್ನು ಎದುರಿಸಬೇಕೇ ಹೊರತು, ಇಂತಹ ಆತ್ಮಹತ್ಯೆಯಂತಹ ಕೃತ್ಯಗಳನ್ನು ಮಾಡಿಕೊಳ್ಳಬಾರದು ಎಂದರು.
ಈ ಹಿಂದೆಯೂ ಆಗಿತ್ತು: 2017ರಲ್ಲಿ ಬಜ್ಪೆಯ ಹೆಡ್ಕಾನ್ಸ್ಟೇಬಲ್ ಪ್ರವೀಣ್ ಎಂಬಾತ ಪ್ರಕರಣವೊಂದರಲ್ಲಿ ಆರೋಪಿಯಾಗಿ ಬಂಧಿಸಲ್ಪಟ್ಟಿದ್ದ. ಆತನನ್ನು ನ್ಯಾಯಾಲಯಕ್ಕೆ ಕರೆತಂದಿದ್ದ ಸಂದರ್ಭ ಆತ ನ್ಯಾಯಾಲಯದಿಂದ ಹಾರಿ ಮೃತಪಟ್ಟಿದ್ದ.
ತೆರವು ಜಾಗ ಮುಚ್ಚಲು ಸೂಚನೆ: ಘಟನಾ ಸ್ಥಳಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮುರಳೀದರ ಪೈ ಬಿ. ಆಗಮಿಸಿ, ಅವಲೋಕನ ನಡೆಸಿದರು. ಕಟ್ಟಡದಲ್ಲಿ ತೆರವಾಗಿರುವ ಜಾಗದಲ್ಲಿ ಗ್ರಿಲ್ಲರ್ ಅಥವಾ ನೆಟ್ ಹಾಕಿ ಮುಚ್ಚುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ಸೂಚನೆ ನೀಡಿದರು.