ಜನರ ಬಳಿ ಸರಕಾರ ಹೋಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಆ.31: ಸರಕಾರದ ಕಾರ್ಯದರ್ಶಿಗಳು ಜಿಲ್ಲೆ, ತಾಲ್ಲೂಕು, ಹಳ್ಳಿಗಳಿಗೆ ಭೇಟಿ ನೀಡಬೇಕು. ತಮ್ಮ ಇಲಾಖೆಯ ಕಾರ್ಯಕ್ರಮ ಅನುಷ್ಠಾನವನ್ನು ಖುದ್ದಾಗಿ ಪರಿಶೀಲನೆ ನಡೆಸಬೇಕು. ತೊಡಕುಗಳಿದ್ದಲ್ಲಿ, ಸ್ಥಳದಲ್ಲಿಯೇ ಬಗೆಹರಿಸಬೇಕು. ಆಗ ಜನರ ಬಳಿಗೆ ಸರಕಾರ ಹೋದಂತಾಗುತ್ತದೆ. ಜನ ಇದ್ದಲ್ಲಿ ಅಭಿವೃದ್ದಿಯಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ವಿಕಾಸಸೌಧದಲ್ಲಿ ಮುಖ್ಯ ಕಾರ್ಯದರ್ಶಿಗಳ ಆಹ್ವಾನದ ಮೇರೆಗೆ ಸರಕಾರದ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳೊಂದಿಗೆ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಹಿರಿಯ ಅಧಿಕಾರಿಗಳ ಈ ಕ್ರಮದಿಂದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತವೆ. ಜನರು ಅಭಿವೃದ್ಧಿ ಸುತ್ತ ಸುತ್ತುವುದಲ್ಲ, ಅಭಿವೃದ್ಧಿ ಜನರಿದ್ದ ಕಡೆ ಆಗಬೇಕು. ಆದುದರಿಂದ, ಇಲಾಖೆ ಮುಖ್ಯಸ್ಥರು ಜಿಲ್ಲಾ ಮತ್ತು ತಾಲ್ಲೂಕುಗಳಿಗೆ ಭೇಟಿ ನೀಡಬೇಕು ಎಂದು ಸೂಚಿಸಿರುವುದಾಗಿ ಅವರು ಹೇಳಿದರು.
ಆಡಳಿತದಲ್ಲಿ ಪಾರದರ್ಶಕತೆ ಇರಬೇಕು. ಇಲಾಖೆಗಳಲ್ಲಿ ಭ್ರಷ್ಟಾಚಾರ ನಿಯಂತ್ರಿಸಿ, ಕಡತ ವಿಲೇವಾರಿಯನ್ನು ವಿಳಂಬ ಮಾಡಬೇಡಿ. ಜನಸಾಮಾನ್ಯರ ಕೆಲಸಗಳಲ್ಲಿ ವಿಳಂಬ ಮಾಡಬಾರದು. ಅವರು ಕಚೇರಿಗಳಿಗೆ ಭೇಟಿ ನೀಡಿದಾಗ ಗೌರವ, ಸೌಜನ್ಯದಿಂದ ನಡೆಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ನುಡಿದರು.
ಈ ಜಡತ್ವ ಒಂದೇ ದಿನದಲ್ಲಿ ಬದಲಾಗಲು ಸಾಧ್ಯವಿಲ್ಲ. ಆದರೆ ಈ ಬದಲಾವಣೆ ತರುವಲ್ಲಿ ನಿಮ್ಮ ಪಾತ್ರ ಬಹುಮುಖ್ಯವಾದುದು. ನಾವೆಲ್ಲರೂ ಸೇರಿ ಮಾಡೋಣ. ಧೈರ್ಯವಾಗಿ ಜನಪರ ಕೆಲಸ ಮಾಡಬೇಕು. ಆಡಳಿತದಲ್ಲಿ ಬದಲಾವಣೆ ಬಂದರೆ, ಜನರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯ. ಸಕಾರಾತ್ಮಕ ಚಿಂತನೆಯೊಂದಿಗೆ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿರುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಆಡಳಿತ ಸುಧಾರಣೆಗೆ ಕ್ರಮ: ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳಲ್ಲಿ ಆಡಳಿತಾತ್ಮಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಿಶೀಲಿಸಲು ಸಲಹಾ ಸಮಿತಿಯನ್ನು ರಚಿಸಲಾಗುತ್ತಿದ್ದು, ನವೆಂಬರ್ 1 ರಿಂದ ಹಲವು ಆಡಳಿತ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಅವರು ಅವರು ಹೇಳಿದರು.
ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಒತ್ತು ನೀಡಿ
ಸ್ವಚ್ಛ ಭಾರತ ಯೋಜನೆ ಬಹಳ ಮಹತ್ವದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ. ಹೀಗಾಗಿ ಯೋಜನೆಯ ಅನುಷ್ಠಾನದಲ್ಲಿ ನಾವು ಹಿಂದೆ ಬೀಳಬಾರದು. ಕೇಂದ್ರ ಸರಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.







