2019-20ರಲ್ಲಿ ಬಿಜೆಪಿ ಅನಾಮಿಕ ಮೂಲಗಳಿಂದ ಪಡೆದ ದೇಣಿಗೆ ಇತರ 6 ಪಕ್ಷಗಳು ಪಡೆದ ಒಟ್ಟು ಮೊತ್ತದ 3.5 ಪಟ್ಟು ಅಧಿಕ !

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಆರ್ಥಿಕ ವರ್ಷ 2019-20ರಲ್ಲಿ ಬಿಜೆಪಿಯು ಅನಾಮಿಕ ಮೂಲಗಳಿಂದ ಒಟ್ಟು ರೂ. 2,642.63 ಕೋಟಿ ದೇಣಿಗೆ ಪಡೆದಿದ್ದು ಈ ಅವಧಿಯಲ್ಲಿ ಒಟ್ಟು ಏಳು ರಾಷ್ಟ್ರೀಯ ಪಕ್ಷಗಳು ಪಡೆದಿರುವ ದೇಣಿಗೆಯ ಪೈಕಿ ಬಿಜೆಪಿಯ ಪಾಲು ಶೇ 78.24 ಆಗಿದೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಮಂಗಳವಾರ ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.
ಬಿಜೆಪಿಯ ಆದಾಯವು ಇತರ ಆರು ರಾಷ್ಟ್ರೀಯ ಪಕ್ಷಗಳು ಘೋಷಿಸಿರುವ ಒಟ್ಟು ಆದಾಯ (ರೂ. 734.78ಕೋಟಿ) ಇದರ 3.5 ಪಟ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ವಿತ್ತ ವರ್ಷ 2019-20ರಲ್ಲಿ ಏಳು ರಾಷ್ಟ್ರೀಯ ಪಕ್ಷಗಳು ಅನಾಮಿಕ ಮೂಲಗಳಿಂದ ಪಡೆದ ಒಟ್ಟು ದೇಣಿಗೆ ರೂ. 4,758.20 ಕೋಟಿಯಾಗಿದೆ
ಈ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಅನಾಮಿಕ ಮೂಲಗಳಿಂದ ಪಡೆದ ಆದಾಯ ರೂ. 526 ಕೋಟಿ ಆಗಿದ್ದರೆ ಸಿಪಿಎಂ ರೂ. 81.32 ಕೋಟಿ, ಎನ್ಸಿಪಿ ರೂ. 25.058 ಕೋಟಿ, ಸಿಪಿಐ ರೂ 1.937 ಕೋಟಿ ಪಡೆದಿವೆ.
ಗುರುತಿಸಲಾದ ದಾನಿಗಳು ರಾಜಕೀಯ ಪಕ್ಷಗಳಿಗೆ ನೀಡಿದ ದೇಣಿಗೆಯ ಒಟ್ಟು ಮೊತ್ತು ಈ ಅವಧಿಯಲ್ಲಿ ರೂ. 1013.80 ಕೋಟಿಯಾಗಿದ್ದರೆ, ತಿಳಿದ ಮೂಲಗಳಿಂದ (ಆಸ್ತಿ ಮಾರಾಟ, ಸದಸ್ಯತ್ವ ಶುಲ್ಕ, ಬ್ಯಾಂಕ್ ಬಡ್ಡಿ) ದೊರಕಿದ ಆದಾಯ ರೂ. 366.99 ಕೋಟಿಯಾಗಿದೆ.
ಅನಾಮಿಕ ಮೂಲಗಳಿಂದ ಏಳು ರಾಜಕೀಯ ಪಕ್ಷಗಳು ಪಡೆದ ಒಟ್ಟು ರೂ. 3,377.41 ಕೋಟಿ ಪೈಕಿ ಇಲೆಕ್ಟೋರಲ್ ಬಾಂಡ್ಗಳ ಮೂಲಕ ಪಡೆದ ಮೊತ್ತ ರೂ. 2,993.826 ಕೋಟಿ ಅಥವಾ ಶೇ 88.642 ಆಗಿದೆ ಎಂದು ವರದಿ ತಿಳಿಸಿದೆ.







