ಕೃಷಿಯೊಂದಿಗೆ ಸ್ವಾವಲಂಭಿ ಬದುಕು ನಮ್ಮದಾಗಬೇಕು: ಶಾಸಕ ಸಂಜೀವ ಮಠಂದೂರು

ಪುತ್ತೂರು: ಕೃಷಿಯಲ್ಲೂ ಬೇರೆ ಬೇರೆ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕತೆಯನ್ನು ಸುದಾರಿಸಲು ಸಾಧ್ಯ. ಇಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆ ಸೇರಿದಂತೆ ಇತರ ಕೆಲಸದ ಮೂಲಕ ಸ್ವಾವಲಂಭಿಯಾಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಬುಧವಾರ ಪುತ್ತೂರಿನ ಮೊಟ್ಟೆತ್ತಡ್ಕಲ್ಲಿರುವ ಕೇಂದ್ರ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ನಡೆದ ಪರಿಶಿಷ್ಟ ಜಾತಿ ಉಪಯೋಜನೆಯಡಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿಯೂ ನಾವು ನೆಮ್ಮದಿಯಿಂದ ಬದುಕಲು ಕೃಷಿಯೇ ಕಾರಣವಾಗಿದೆ. ಯಾಂತ್ರಿಕೃತ ಕೃಷಿ ಪದ್ದತಿಯಿಂದ ಇನ್ನಷ್ಟು ಅಭಿವೃದ್ಧಿ ಹೊಂದಬಹುದು. ನಮ್ಮ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆ ಬೆಳೆಯುತ್ತಾರೆ. ಭತ್ತ ಬೆಳೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ಹಡಿಲು ಭೂಮಿಯಲ್ಲಿ ಭತ್ತ ಬೆಳೆಯುವ ಪ್ರಯತ್ನ ಮಾಡಿದ್ದೇವೆ. ಅಕ್ಕಿ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಬಂಧುಗಳ ಆರ್ಥಿಕ ಅಭಿವೃದ್ದಿ ಆಗಬೇಕೆಂದು ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ನೀಡಿದ ಮಾನದಂಡದಂತೆ ಪ್ರತಿ ಇಲಾಖೆಯಲ್ಲೂ ಕೂಡಾ ಶೇಕಡವಾರು ಮೀಸಲಾತಿ ಪರಿಶಿಷ್ಟ ಜಾತಿ, ಪಂಗಡದವರಿಗೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಕೃಷಿ ಸಂಶೋಧನಾ ಕೇಂದ್ರಗಳಿಗೆ ಸರಕಾರ ನೀಡುವ ಅನುದಾದ ಒಂದಷ್ಟು ಸ್ಥಳೀಯ ಪರಿಶಿಷ್ಟ ಜಾತಿ ಬಂದುಗಳಿಗೆ ತಮ್ಮ ಜೀವನಕ್ಕೆ ವಿವಿಧ ಸೌಲಭ್ಯ ವಿತರಣೆ ಮಾಡಲಾಗುತ್ತಿದೆ. ಈ ಸೌಲಭ್ಯ ಪಡೆದ ಕುಟುಂಬ ನೂರಕ್ಕೆ ನೂರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಗೇರು ಸಂಶೋಧನಾ ನಿರ್ದೇಶನಾಲಯದ ನೋಡೆಲ್ ಅಧಿಕಾರಿ ಡಾ.ಈರ್ ದಾಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಅವರು ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿ ವಿವಿಧ ಮಾಹಿತಿ ನೀಡಿದರು.
ಗೇರು ಸಂಶೋಧನಾಲಯದ ಪ್ರಧಾನ ವಿಜ್ಞಾನಿ ಪಿ.ಎನ್ ರವಿಪ್ರಸಾದ್ ಸ್ವಾಗತಿಸಿದರು. ವಿಜ್ಞಾನಿ ಡಾ.ರಾಜ್ಯಶೇಖರ್ ವಂದಿಸಿದರು. ಗೇರು ಸಂಶೋಧನಾಲಯದ ತಾಂತ್ರಿಕ ಅಧಿಕಾರಿ ಪ್ರಕಾಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.







