ರಾಜ್ಯ ಸರಕಾರ ತಜ್ಞರ ವರದಿ ಆಧರಿಸಿ ಶಾಲಾ ಕಾಲೇಜು ಆರಂಭಿಸಬೇಕು: ಕಿಮ್ಮನೆ ರತ್ನಾಕರ್

ಚಿಕ್ಕಮಗಳೂರು, ಸೆ.1: ಶಾಲಾ ಕಾಲೇಜು ಆರಂಭಕ್ಕೂ ಮುನ್ನ ರಾಜ್ಯ ಸರಕಾರ ತಜ್ಞರ ಸಮಿತಿ ವರದಿಗೆ ಆಧ್ಯತೆ ನೀಡಬೇಕು. ತಜ್ಞರೇ ತಪ್ಪು ವರದಿ ನೀಡಿದರೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಮೂರನೇ ಅಲೆಯ ಭೀತಿ ಜನರಲ್ಲಿದೆ. ಸರಕಾರ ತಜ್ಞರ ವರದಿ ವಿರುದ್ಧ ಕಾರ್ಯಕ್ರಮಗಳನ್ನು ಮಾಡಬಾರದು, ತಜ್ಞರು ಸುಮ್ಮನೆ ತಮ್ಮ ಅಭಿಪ್ರಾಯವನ್ನು ನೀಡುವುದಿಲ್ಲ, ಅವರು ಸಮಾಜದ ಹಿತದೃಷ್ಟಿಯಿಂದ ನೈಜ ಸ್ಥಿತಿಯನ್ನು ಹೇಳುತ್ತಾರೆ. ಹಿಂದಿನ ಫಲಿತಾಂಶವನ್ನು ಆಧರಿಸಿ ಮುಂದಾಗೋ ದುರಂತದ ಬಗ್ಗೆ ಅಭಿಪ್ರಾಯ ನೀಡುತ್ತಾರೆ ಎಂದರು.
ರಾಜ್ಯ ಸರಕಾರ ತಜ್ಞರ ವರದಿ ವಿರುದ್ಧವಾಗಿ ಈ ಹಿಂದೆ ನಡೆದುಕೊಂಡಿದೆ. ಇದರ ಪರಿಣಾಮ ಈಗಾಗಿರೋ ಅನಾಹುತಗಳಾಗಿವೆ. ಎಲ್ಲಾ ಅನಾಹುತಗಳಿಗೆ ಸರಕಾರವೇ ನೇರಹೊಣೆ. ದೇಶಾದ್ಯಂತ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ ಲೋಪವಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿರುವ ತಪ್ಪನ್ನು ರಾಜ್ಯಗಳೂ ಮಾಡುತ್ತಿವೆ. ಜನಸಂಖ್ಯೆಯಷ್ಟು ಲಸಿಕೆ ಇದೆಯೇ ಎಂಬುದನ್ನು ನೋಡಿಕೊಂಡು ಹೇಳಿಕೆ ನೀಡಬೇಕು. ರಾಜ್ಯ ಸರಕಾರದವರು ನಾಳೆ ಕೊಡುತ್ತೇವೆ, ನಾಡಿದ್ದು ನೀಡುತ್ತೇವೆ ಎನ್ನುತ್ತಾರೆ, ಬೆಳಗಾಗುತ್ತಲೇ ಲಸಿಕೆ ಇಲ್ಲ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.







