ಬಾಗಲಕೋಟೆ ಮತ್ತು ಶಿವಮೊಗ್ಗಕ್ಕೆ ಎರಡು ಸಚಿವ ಸ್ಥಾನ ಕೊಟ್ಟಿರುವುದು ಏಕೆ?: ಶಾಸಕ ಯತ್ನಾಳ್ ಆಕ್ರೋಶ

ವಿಜಯಪುರ, ಸೆ. 1: `ಬಾಗಲಕೋಟೆ ಮತ್ತು ಶಿವಮೊಗ್ಗಕ್ಕೆ ಎರಡು ಸಚಿವ ಸ್ಥಾನವನ್ನು ಕೊಟ್ಟಿರುವುದು ಏಕೆ?' ಎಂದು ಪ್ರಶ್ನಿಸಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, `ಕಲಬುರಗಿ, ಚಾಮರಾಜನಗರ ಮತ್ತು ಮೈಸೂರಿನ ಜನರು ಬಿಜೆಪಿ ಪಕ್ಷಕ್ಕೆ ಮತ ನೀಡಿಲ್ಲವೇ? ಎಂದು ಪಕ್ಷದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನ್ಯಾಯಯುತವಾಗಿ ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ಕೊಡಬೇಕು. ಸಿಂಧಗಿ ಕ್ಷೇತ್ರದ ಉಪಚುನಾವಣೆಗೂ ಮೊದಲೇ ಜಿಲ್ಲೆಗೆ ಸಚಿವ ಸ್ಥಾನ ನೀಡುವ ಕುರಿತು ಪಕ್ಷ ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲ ಜಿಲ್ಲೆಗೆ ಒಂದೊಂದು ಸಚಿವ ಸ್ಥಾನ ನೀಡಬೇಕು. ಕೆಲವರಿಗೆ ಯತ್ನಾಳ್ ಸಚಿವ ಆಗಬಾರದು ಅನ್ನುವ ಮನೋಭಾವವಿದೆ. ಹಣೆಬರಹದಲ್ಲಿದ್ದರೆ ಯಾರಿಂದಲೂ ತಪ್ಪಿಸಲು ಆಗಲ್ಲ. ಈ ಬಾರಿ ವಿಜಯಪುರಕ್ಕೆ ಅನ್ಯಾಯ ಆಗುವುದಿಲ್ಲ' ಎಂದು ಹೇಳಿದರು.
`ಹೈಕಮಾಂಡ್ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ನಂಬಿಕೆ ಇದೆ. ಜಿಲ್ಲೆಯಲ್ಲಿ ಮೂಲ ಬಿಜೆಪಿಗರು ಮಂತ್ರಿ ಆಗಲಿದ್ದಾರೆ. ಕಾಲ ಕೂಡಿ ಬಂದರೆ ನಾನು ಸಿಎಂ ಆಗುವುದನ್ನು ಯಾರು ತಪ್ಪಿಸಲು ಆಗುವುದಿಲ್ಲ. ಕಾಲ ಯಾರನ್ನು ಕೇಳಿ ಬರುವುದಿಲ್ಲ. ಸಿಎಂ ಸ್ಥಾನದ ರೇಸ್‍ನಲ್ಲಿ ಬಸವರಾಜ ಬೊಮ್ಮಾಯಿ ಅವರ ಹೆಸರು ಇರಲಿಲ್ಲ, ಆದರೂ ಸಿಎಂ ಆಗಿದ್ದಾರಲ್ಲ. ಕಾಲಕ್ರಮೇಣ ಬದಲಾವಣೆ ನಡೆಯಲಿದ್ದು, ಒಳ್ಳೆಕಾಲ ಬಂದೇ ಬರಲಿದೆ ಎಂಬ ನಿರೀಕ್ಷೆ ನಮ್ಮದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ನುಡಿದರು.







