ಅಡುಗೆ ಅನಿಲ ಬೆಲೆ ಏರಿಕೆಗೆ ಕಾಂಗ್ರೆಸ್ ಕಾರಣ: ಬಿಜೆಪಿ ಸಂಸದ ಸಂಗಣ್ಣ ಕರಡಿ
''ಅವರು ಮಾಡಿದ ಸಾಲ ನಾವು ತೀರಿಸುತ್ತಿದ್ದೇವೆ''

ಸಂಸದ ಸಂಗಣ್ಣ ಕರಡಿ
ಕೊಪ್ಪಳ, ಸೆ. 1: `ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲೋತ್ಪನ್ನಗಳ ಬೆಲೆ ಏರಿಕೆ ಬೆನ್ನಲ್ಲೆ ಇದೀಗ ಅಡುಗೆ ಅನಿಲ ಬೆಲೆಯೂ ಏರಿಕೆಯಾಗಿದ್ದು, ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಕಾರಣ' ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸಂಗಣ್ಣ ಕರಡಿ ಉಡಾಫೆ ಉತ್ತರ ನೀಡಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನಿಮ್ಮಪ್ಪ ಸಾಲ ಮಾಡಿದರೆ ಮಗನಾಗಿ ನೀನು ಸಾಲ ತೀರಿಸಬೇಕಾಗುತ್ತದೆ ಹಾಗೆಯೇ ಇಂದು ನಾವು(ಕೇಂದ್ರ ಸರಕಾರ) ಅವರು ಮಾಡಿದ ಸಾಲವನ್ನು ತೀರಿಸುತ್ತಿದ್ದೇವೆ. ಅವರು ಸಾಲ ಮಾಡಿದ್ದು ಈಗ ನಾವು ಅನಿವಾರ್ಯವಾಗಿ ಸಾಲ ಬಗೆಹರಿಸಬೇಕಿದೆ' ಎಂದು ತಮ್ಮದೆ ದಾಟಿಯಲ್ಲಿ ಹೇಳಿದರು.
`ದೇಶದಲ್ಲಿ ಯುಪಿಎ ಸರಕಾರ ಇದ್ದಾಗ ತೈಲ ಕಂಪೆನಿಗಳಿಗೆ ಬಾಂಡ್ ಕೊಟ್ಟಿದ್ದರು. ನಮ್ಮ ಸರಕಾರ 59 ಸಾವಿರ ಕೋಟಿ ರೂಪಾಯಿ ಹಾಗೂ 35 ಸಾವಿರ ಕೋಟಿ ರೂಪಾಯಿ ಸಾಲ ತುಂಬಿದೆ. ಇನ್ನೂ ಒಂದು ಲಕ್ಷ ಕೋಟಿ ರೂ.ಬಾಕಿ ಇದೆ. ಆದರೂ, ನಾವು ಬಡವರಿಗೆ ಏನು ಸಹಾಯ ಮಾಡಬೇಕೋ ಮಾಡಿದ್ದೇವೆ. ಜನರು ಸಾಲ ಮಾಡಬೇಕಾ ಕೇಳಿದರೆ ಏನು ಹೇಳೋದು. ನಾವು ದೇಶ ಒತ್ತೆ ಇಡಬೇಕಾ? ಅಂದರೆ, ಸರಕಾರ ನಡೆಸಲು ಏನು ಮಾಡಬೇಕು ಎಂದು ಸಂಗಣ್ಣ ಕರಡಿ ಮರು ಪ್ರಶ್ನೆ ಹಾಕಿದರು.
ದೇಶದಲ್ಲಿ ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಸಂಪನ್ಮೂಲವಿಲ್ಲ. ದೇಶವನ್ನು ಮುನ್ನಡೆಸುವ ದೃಷ್ಟಿಯಿಂದ ಬೆಲೆ ಏರಿಕೆ ಅನಿವಾರ್ಯ. ಆದರೂ ಕೇಂದ್ರ ಸರಕಾರ ಬಡವರ ಪರವಾದ ಯಾವುದೇ ಯೋಜನೆ ಮತ್ತು ಕಾರ್ಯಕ್ರಮಗಳನ್ನು ನಿಲ್ಲಿಸಿಲ್ಲ ಎಂದು ಸಂಗಣ್ಣ ಕರಡಿ ಸಮಜಾಯಿಷಿ ನೀಡಿದರು.







