ದೇಶದ ಆರ್ಥಿಕತೆ ಬೆಳೆಸುವಲ್ಲಿ ಬಿಜೆಪಿ ಸರಕಾರ ವಿಫಲ: ಕೇಂದ್ರದ ವಿರುದ್ಧ ಸಚಿನ್ ಪೈಲಟ್ ವಾಗ್ದಾಳಿ

ಬೆಂಗಳೂರು, ಸೆ.1: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಆರ್ಥಿಕತೆಯನ್ನು ಬೆಳೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಕಿಡಿಗಾರಿದರು.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತಂದಿರುವ ವಿವಿಧ ಯೋಜನೆಗಳನ್ನು ಖಾಸಗೀಕರಣಗೊಳಿಸುವ ಕೆಲಸವನ್ನಷ್ಟೆ ಮಾಡುತ್ತಿದೆ ಎಂದು ಹೇಳಿದರು.
ಕಳೆದ ಆರು ದಶಕಗಳಿಂದ ದೇಶದಲ್ಲಿ ರೂಪುಗೊಳ್ಳುತ್ತಿದ್ದ ವಿವಿಧ ಆರ್ಥಿಕ ಮೂಲಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ಈ ಸರಕಾರದ ಖಾಸಗೀಕರಣ ನೀತಿ ಪಾರದರ್ಶಕತೆಯನ್ನು ಕಳೆದುಕೊಳ್ಳುತ್ತಿದೆ. ನೀತಿಗಳು ಪಾರದರ್ಶಕತೆಯಿಂದ ಕೂಡಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. 1991ರಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಅಧಿಕಾರದಲ್ಲಿದ್ದಾಗ ಜಾಗತೀಕರಣವನ್ನು ಆರಂಭಿಸಿ ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಿತ್ತು ಎಂದು ಅವರು ಹೇಳಿದರು.
ದೇಶದಲ್ಲಿ ಪೋಲಿಯೊ ಲಸಿಕೆ ನೀಡುವುದನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಆದರೆ, ಈಗ ಕೋವಿಡ್ ಲಸಿಕೆಯನ್ನು ಕೇಂದ್ರ ಸರಕಾರವೇ ನೇರವಾಗಿ ಮಾರಾಟ ಮಾಡಲು ಮುಂದಾಗಿರುವುದರಿಂದ ಅವ್ಯವಸ್ಥೆ ಉಂಟಾಗಿದೆ. ಎಲ್ಲ ರಾಜ್ಯಗಳಿಗೆ ಲಸಿಕೆಯನ್ನು ಸಮರ್ಪಕವಾಗಿ ಹಂಚಿಕೆ ಮಾಡಲು ಈ ಸರಕಾರಕ್ಕೆ ಆಗಿಲ್ಲ ಎಂದು ಸಚಿನ್ ಪೈಲಟ್ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್, ಮಾಜಿ ಸಚಿವ ಶಿವರಾಜ್ ತಂಗಡಗಿ, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಬಿ.ಎಲ್.ಶಂಕರ್ ಮತ್ತಿತರು ಉಪಸ್ಥಿತರಿದ್ದರು.







