ಕಾವೇರಿ ಕೂಗು ಹೆಸರಲ್ಲಿ ಹಣ ಸಂಗ್ರಹ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು, ಸೆ.1: ಕಾವೇರಿ ಕೂಗು ಯೋಜನೆಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸದಂತೆ ಇಶಾ ಫೌಂಡೇಶನ್‌ಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ವಿಚಾರಣೆ ಪೂರ್ಣಗೊಳಿಸಿ ಬುಧವಾರ ತೀರ್ಪು ಕಾಯ್ದಿರಿಸಿದೆ.
ಕಾವೇರಿ ಕೂಗು ಅಭಿಯಾನ ಹೆಸರಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹ ವಿಚಾರ ಸಂಬಂಧ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಈ ತೀರ್ಪುನ್ನು ಕಾಯ್ದಿರಿಸಿತು. ಕಾವೇರಿ ನದಿ ಪಾತ್ರದುದ್ದಕ್ಕೂ ಗಿಡ ನೆಡುವ ಉದ್ದೇಶದಿಂದ ಸದ್ಗುರು ಜಗ್ಗಿ ವಾಸುದೇವ್ ಅವರ ಈಶಾ ಫೌಂಡೇಶನ್ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದನ್ನು ಆಕ್ಷೇಪಿಸಿ ವಕೀಲ ಎ.ವಿ.ಅಮರನಾಥ್ ಪಿಐಎಲ್ ಸಲ್ಲಿಸಿದ್ದರು. ನದಿ ಪಾತ್ರದುದ್ದಕ್ಕೂ 639 ಕಿ.ಮೀ.ವರೆಗೆ 253 ಕೋಟಿ ಗಿಡಗಳನ್ನು ನೆಡುವುದಾಗಿ ಪ್ರಚಾರ ಮಾಡುತ್ತಾ ಪ್ರತಿ ಗಿಡಕ್ಕೆ 42 ರೂ. ಸಂಗ್ರಹಿಸುತ್ತಿದೆ. ಈ ರೀತಿ ಒಟ್ಟು 10 ಸಾವಿರ ಕೋಟಿಗೂ ಅಧಿಕ ಹಣ ಸಂಗ್ರಹಿಸಲು ಮುಂದಾಗಿರುವುದು ಕಾನೂನು ಬಾಹಿರ ಎಂದು ಆರೋಪಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಕಾರಣಾಂತರಗಳಿಂದ ಹೈಕೋರ್ಟ್ ಅರ್ಜಿಯನ್ನು ಸ್ವಯಂಪ್ರೇರಿತ ಅರ್ಜಿಯಾಗಿ ಪರಿವರ್ತಿಸಿಕೊಂಡಿತ್ತು.





