ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಗೆ ವ್ಯಾಪಕ ಖಂಡನೆ
ಮಂಗಳೂರು, ಸೆ.1: ಮದ್ರಸಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಿದ್ದಾರೆ ಎಂದು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಮುಸ್ಲಿಂ ಲೀಗ್: ಮುಂದಿನ ಜಿಪಂ ಮತ್ತು ತಾಪಂ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಜನಸಾಮಾನ್ಯರ ಮಧ್ಯೆ ಮದ್ರಸಗಳನ್ನು ಎತ್ತಿ ಕಟ್ಟಿ ವಿಷ ಬೀಜವನ್ನು ಬಿತ್ತಿ ಮತ ಪಡೆಯುವ ಹುನ್ನಾರ ಇದಾಗಿದೆ ಎಂದು ಮುಸ್ಲಿಂ ಲೀಗ್ ಉಪಾಧ್ಯಕ್ಷ ತಬೂಕ್ ದಾರಿಮಿ ತಿಳಿಸಿದ್ದಾರೆ.
ದಾರಿಮಿ ಒಕ್ಕೂಟ: ಮದ್ರಸಗಳಲ್ಲಿ ಎಂದೂ ಭಯೋತ್ಪಾದನೆಯನ್ನು ಕಲಿಸಲಾಗುತ್ತಿಲ್ಲ. ಆದರೆ ಸಿ.ಟಿ.ರವಿ ಈ ವಿಷಯದಲ್ಲಿ ಬಾಲಿಶ ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ. ಭಾರತೀಯ ಮದ್ರಸಗಳಿಂದ ಸೃಷ್ಟಿಯಾದ ತಾಲಿಬಾನಿಗಳ ಲೆಕ್ಕ ತೋರಿಸಲಿ ಎಂದು ದಾರಿಮೀಸ್ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್‌ಬಿ ದಾರಿಮಿ ಆಗ್ರಹಿಸಿದ್ದಾರೆ.
ಮಾನವರು ಸಹೋದರರು: ಮದ್ರಸಗಳ ಬಗ್ಗೆ ಸಿ.ಟಿ.ರವಿಯ ಹೇಳಿಕೆಯು ಬೇಜವಾಬ್ದಾರಿಯಿಂದ ಕೂಡಿದೆ. ಪರಮತ ದ್ವೇಷದ ಪರಮಾವಧಿ ಇದಾಗಿದೆ. ಮುಸ್ಲಿಂ ಮಕ್ಕಳಿಗೆ ಇಸ್ಲಾಂ ಧರ್ಮದ ಬಾಲಪಾಠ ಹೇಳಿಕೊಟ್ಟು ಅವರನ್ನು ಧರ್ಮಾಧರಿತ ಮತ್ತು ಶಾಂತಿ, ಸೌಹಾರ್ದತೆಯ ಸಹಬಾಳ್ವೆ ನಡೆಸಲು ಕಲಿಸಿ ಅಪ್ರತಿಮ ದೇಶಪ್ರೇಮಿಗಳನ್ನಾಗಿ ಮಾರ್ಪಡಿಸುವ ದೇಶದ ಶಾಂತಿಧಾಮಗಳಾದ ಮದ್ರಸಗಳು ಮಾನವೀಯ ಮೌಲ್ಯಗಳ ತಳಹದಿಯಲ್ಲಿ ರೂಪುಗೊಂಡಿವೆ. ಎಲ್ಲೋ ಕೆಲವೆಡೆ ನಾಮಧಾರಿಗಳು ಮದ್ರಸ ಹೆಸರಿನಲ್ಲಿ ಏನಾದರೂ ಧರ್ಮದ್ರೋಹಿ, ಸಮಾಜದ್ರೋಹಿ ಚಟುವಟಿಕೆಗಳನ್ನು ಮಾಡಿದ್ದರೆ ಅದನ್ನು ಸರ್ವ ಮುಸ್ಲಿಮರ ತಲೆಗೆ ಕಟ್ಟುವುದು ಸರಿಯಲ್ಲ ಎಂದು ಮಾನವರು ಸಹೋದರರು ವೇದಿಕೆಯ ಮುಖಂಡ ಕೆ.ಎ.ಅಬ್ದುಲ್ ಅಝೀಝ್ ಪುಣಚ ತಿಳಿಸಿದ್ದಾರೆ.
ಎಸ್‌ಎಂಎ: ಜವಾಬ್ದಾರಿಯುತ ಸ್ಥಾನದಲ್ಲಿರುವ ಮತ್ತು ಒಬ್ಬ ಜನಪ್ರತಿನಿಧಿಯೂ ಆಗಿರುವ ಸಿ.ಟಿ.ರವಿಯವರಿಂದ ಇಂತಹ ಮಾತುಗಳು ಬರಬಾರದು. ಇದು ಖಂಡನೀಯ ಎಂದು ಕರ್ನಾಟಕ ರಾಜ್ಯ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ (ಎಸ್‌ಎಂಎ) ತೀವ್ರವಾಗಿ ಖಂಡಿಸಿದೆ.
ಮುಸ್ಲಿಂ ವರ್ತಕರ ಸಂಘ: ನಾಡಿನ ಜನತೆಯು ಅನ್ಯೋನ್ಯತೆಯಿಂದಿರುವುದನ್ನು ಸಹಿಸದ ಮತ್ತು ಭವಿಷ್ಯದ ರಾಜಕಾರಣವನ್ನು ಸುಭದ್ರಪಡಿಸುವ ಸಲುವಾಗಿ ಸಿ.ಟಿ.ರವಿ ಇಂತಹ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಯಾವ ಮದ್ರಸಗಳಲ್ಲಿ ಎಷ್ಟು ತಾಲಿಬಾನಿಗಳು ಸೃಷ್ಟಿಯಾಗಿದ್ದಾರೆ ಎಂದು ಸಿಟಿ ರವಿ ಬಹಿರಂಗಪಡಿಸಲಿ. ಇಲ್ಲದಿದ್ದರೆ ಮುಸ್ಲಿಮರ ತಪ್ಪೊಪ್ಪಿಕೊಳ್ಳಲಿ ಎಂದು ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಒತ್ತಾಯಿಸಿದ್ದಾರೆ.
ಮುಸ್ಲಿಂ ಒಕ್ಕೂಟ: ಸಚಿವ ಸ್ಥಾನ ಕೈ ತಪ್ಪಿಹೋದ ನಂತರ ಹತಾಶೆಗೊಳಗಾಗಿರುವ ಸಿ.ಟಿ. ರವಿ ಮತಿಭ್ರಮಣೆಗೊಂಡಂತೆ ದೇಶದ ಮದ್ರಸಾಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಿದ್ದಾರೆ ಎಂಬ ಅಸಂಬದ್ಧ ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದಾರೆ. ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಮದ್ರಸಗಳು ಈ ದೇಶದ ಸ್ವಾತಂತ್ರ್ಯ ಸೇನಾನಿಗಳನ್ನು ಸೃಷ್ಟಿಸಿದ ಮಿಲಿಟರಿ ಕೇಂದ್ರಗಳಾಗಿವೆ ಎಂಬುದನ್ನು ಸಿಟಿ ಅರಿತುಕೊಳ್ಳಲಿ ಎಂದು ಮಾಜಿ ಮೇಯರ್, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ತಿಳಿಸಿದ್ದಾರೆ.







