ಅಲ್ಲಾಗಿರಿರಾಜರಿಗೆ ಕಲ್ಲಚ್ಚು ಪ್ರಶಸ್ತಿ ಪ್ರದಾನ

ಮಂಗಳೂರು, ಸೆ.1: ನಗರದ ಕಲ್ಲಚ್ಚು ಪ್ರಕಾಶನ ಕೊಡಮಾಡುವ 12ನೇ ಆವೃತ್ತಿಯ 2021ರ ವಾರ್ಷಿಕ ಕಲ್ಲಚ್ಚು ಪ್ರಶಸ್ತಿಯನ್ನು ಗಜಲ್ ಕವಿ ಕನಕಗಿರಿಯ ಅಲ್ಲಾಗಿರಿರಾಜರಿಗೆ ಮಂಗಳವಾರ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕನ್ನಡದಲ್ಲಿ ಗುಣಮಟ್ಟದ ಗಜಲ್ ಬರಹಗಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಹಿತ ಎಲ್ಲಾ ಪ್ರಮುಖ ಸಾಹಿತ್ಯ ಸಮ್ಮೇಳನಗಳಲ್ಲಿ ಗಜಲ್‌ಗಾಗಿ ವಿಶೇಷ ಗೋಷ್ಠಿ ಏರ್ಪಡಿಸುವ ಅಗತ್ಯವಿದೆ ಎಂದು ಹೇಳಿದರು.
ಗಜಲ್ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಅಲ್ಲಾಗಿರಿರಾಜ ‘ಸಮಾಜದ ಬವಣೆಯನ್ನು ತೋರ್ಪಡಿಸದ ಯಾವುದೇ ಸಾಹಿತ್ಯ ಶುಷ್ಕ’ ಎಂದರಲ್ಲದೆ ಗಜಲ್ನ ಹುಟ್ಟು ಮತ್ತು ಪ್ರಕಾರದ ಕುರಿತು ವಿಸ್ತೃತ ಮಾಹಿತಿ ನೀಡಿದರು.
ಅತಿಥಿಗಳಾಗಿ ಸಂತ ಅಲೋಷಿಯಸ್ ಕಾಲೇಜಿನ ಕುಲಸಚಿವ ಡಾ. ಆಲ್ವಿನ್ ವಿನ್ಸೆಂಟ್ ಡೇಸಾ, ಗೋವಿಂದದಾಸ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ ವಿಜಯಲಕ್ಷ್ಮಿ ನಾಯಕ್, ನ್ಯಾಶನಲ್ ಕಾಲೇಜಿನ ಪ್ರಾಂಶುಪಾಲ ಯುಎಚ್ ಖಾಲಿದ್ ಉಜಿರೆ, ಪ್ರಕಾಶನದ ಲೇಖಕ ಬಳಗದ ಬೆಳಗಾವಿಯ ಕವಿ ಅಶೋಕ ಮಳಗಲಿ, ಎನ್‌ವಿ ಪೌಲೋಸ್, ಕೊಂಕಣಿ ಕವಿ ಮಾರ್ಷಲ್ ಡಿಸೋಜ ಮಾತನಾಡಿದರು.
ವಿನ್ರಮ ಇಡ್ಕಿದು ಗಜಲ್ ಗಾಯನ ನಡೆಸಿದರು. ವಿಜಯಲಕ್ಷ್ಮಿ ಕಟೀಲು ಅತಿಥಿಗಳನ್ನು ಪರಿಚಯಿಸಿದರು. ಪ್ರಕಾಶನದ ಮುಖ್ಯಸ್ಥ ಮಹೇಶ ಆರ್. ನಾಯಕ್ ಸ್ವಾಗತಿಸಿದರು.







