ನೂತನ ಶಿಕ್ಷಣ ನೀತಿಯಲ್ಲಿ ಅರ್ಥಶಾಸ್ತ್ರವನ್ನು ಕಡೆಗಣಿಸದಿರಲು ಮನವಿ
ಮಂಗಳೂರು, ಸೆ.1: ನೂತನ ಶಿಕ್ಷಣ ನೀತಿಯಲ್ಲಿ ಅರ್ಥಶಾಸ್ತ್ರ ವಿಷಯವನ್ನು ಬಿಕಾಂ ಮತ್ತು ಬಿಬಿಎ ಪಠ್ಯಕ್ರಮದಲ್ಲಿ ಕಡೆಗಣಿಸದಿರಲು ಮಂಗಳೂರು ವಿವಿಯ ಅರ್ಥಶಾಸ್ತ್ರ ಸಂಘದ ನಿಯೋಗವು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹಾಗೂ ವಿವಿ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಅವರಿಗೆ ಮನವಿ ಸಲ್ಲಿಸಿದೆ.
ನೂತನ ಶಿಕ್ಷಣ ನೀತಿಯ ಅನುಸಾರ ರಚಿತವಾದ ಬಿಕಾಂ ಮತ್ತು ಬಿಬಿಎ ಪಠ್ಯಕ್ರಮದ ಕರಡು ಪ್ರತಿಯಲ್ಲಿ ಅರ್ಥಶಾಸ್ತ್ರ ವಿಷಯ ಕಾಣುತ್ತಿಲ್ಲ. ಇದರಿಂದ ಹಲವು ವರ್ಷಗಳಿಂದ ಮಂಗಳೂರು ವಿವ8ಇ ವ್ಯಾಪ್ತಿಗೆ ಒಳಪಟ್ಟಂತೆ ಇದನ್ನೇ ನಂಬಿ ದುಡಿಯುತ್ತಿರುವ ನೂರಾರು ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ. ಅರ್ಥಶಾಸ್ತ್ರವು ವಾಣಿಜ್ಯಶಾಸ್ತ್ರದ ತಾಯಿಬೇರಾಗಿದೆ. ಇದರ ಪ್ರಾಮುಖ್ಯತೆ ದಿನನಿತ್ಯದ ವ್ಯವಹಾರಗಳಲ್ಲಿ ಹಾಸುಹೊಕ್ಕಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಅರ್ಥಶಾಸ್ತ್ರ ಸಂಘದ ಅಧ್ಯಕ್ಷ ಡಾ. ರಾಮಕೃಷ್ಣ ಬಿ.ಎಂ, ಮಂಗಳಗಂಗೋತ್ರಿಯ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ವಿಶ್ವನಾಥ್, ಅಮುಕ್ತ್ ಅಧ್ಯಕ್ಷ ಡಾ ಜೊಸೆಫ್, ನಾರ್ಬಟ್ ಲೋಬೊ, ಲಕ್ಷ್ಮಿನಾರಾಯಣ ಭಟ್, ಡಾ ಪುರುಷೋತ್ತಮ ಮತ್ತಿತರರು ನಿಯೋಗದಲ್ಲಿದ್ದರು.





