ಸಂರಕ್ಷಿತ ಇವಿಎಂಗಳ ಬಿಡುಗಡೆಗೆ ಆಗ್ರಹಿಸಿದ ಮನವಿಯ ತುರ್ತು ವಿಚಾರಣೆಗೆ ಚುನಾವಣಾ ಆಯೋಗ ಆಗ್ರಹ

ಹೊಸದಿಲ್ಲಿ, ಸೆ. 1: ಈ ವರ್ಷ ಆರಂಭದಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಳಸಲಾದ ಇವಿಎಂಗಳನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ ತನ್ನ ಮನವಿಯನ್ನು ತುರ್ತು ವಿಚಾರಣೆ ನಡೆಸುವಂತೆ ಚುನಾವಣಾ ಆಯೋಗ ಬುಧವಾರ ಸುಪ್ರೀಂ ಕೋರ್ಟ್ ಅನ್ನು ಕೋರಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ಮನವಿಯನ್ನು ಮುಂದಿನ ವಾರ ವಿಚಾರಣೆ ನಡೆಸಲು ಒಪ್ಪಿಕೊಂಡಿತು. ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ತನ್ನ ಮನವಿಯಲ್ಲಿ ಚುನಾವಣಾ ಆಯೋಗ, ವಿಧಾನ ಸಭೆ ಚುನಾವಣೆಯಲ್ಲಿ ಬಳಸಲಾದ ಇವಿಎಂ ಹಾಗೂ ವಿಪಿ ಪ್ಯಾಟ್ಗಳು ನಿರುಪಯೋಗಿಯಾಗಿ ಬಿದ್ದುಕೊಂಡಿವೆ. ಸುಪ್ರೀಂ ಕೋರ್ಟ್ ಎಪ್ರಿಲ್ 27ರಂದು ನೀಡಿದ ಆದೇಶದ ಪ್ರಕಾರ ಅದನ್ನು ಸಂರಕ್ಷಿಸಿ ಇರಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿತು.
ಸುಪ್ರೀಂ ಕೋರ್ಟ್ ಎಪ್ರಿಲ್ನಲ್ಲಿ ನೀಡಿದ ತನ್ನ ಆದೇಶದಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಮನವಿ ಸಲ್ಲಿಸುವ ಕಾಲ ಮಿತಿಯನ್ನು ವಿಸ್ತರಿಸಿತ್ತು. ಇಂತಹ ಮನವಿಗಳ ವಿಚಾರಣೆ ವೇಳೆ ಪುರಾವೆಗಳಾಗಿ ಬಳಬೇಕಾಗಿರುವುದರಿಂದ ಚುನಾವಣೆಯಲ್ಲಿ ಬಳಸಲಾಗಿದ್ದ ಇವಿಎಂ ಹಾಗೂ ವಿವಿ ಪ್ಯಾಟ್ಗಳನ್ನು ಸಂರಕ್ಷಿಸಿ ಇರಿಸಬೇಕು ಎಂದು ಅದು ಹೇಳಿತ್ತು. ನಾಲ್ಕು ರಾಜ್ಯಗಳಾದ ಪಶ್ಚಿಮಬಂಗಾಳ, ಅಸ್ಸಾಂ, ಕೇರಳ, ಕೇಂದ್ರಾಡಳಿತ ಪ್ರದೇಶ ದಿಲ್ಲಿ ಹಾಗೂ ಪುದುಚೇರಿಯಲ್ಲಿ ಈ ವರ್ಷ ಆರಂಭದಲ್ಲಿ ಚುನಾವಣೆ ನಡೆದಿತ್ತು.
ಈ ಚುನಾವಣೆಗೆ ಸಂಬಂಧಿಸಿ ಮನವಿ ಸಲ್ಲಿಸಲು ಸಮಯ ಮಿತಿ ನಿಗದಿಪಡಿಸುವಂತೆ ಚುನಾವಣಾ ಆಯೋಗದ ಪರ ವಕೀಲ ವಿಕಾಸ್ ಸಿಂಗ್ ಬುಧವಾರ ಆಗ್ರಹಿಸಿದ್ದಾರೆ. ಉತ್ತರಪ್ರದೇಶ, ಉತ್ತರಾಖಂಡ ಹಾಗೂ ಪಂಜಾಬ್ನಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಗೆ ಈ ಇವಿಎಂ ಹಾಗೂ ವಿವಿ ಪ್ಯಾಟ್ಗಳ ಅಗತ್ಯ ಇದೆ ಎಂದು ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು.







