ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸಿದ್ದಗೊಳ್ಳುತ್ತಿದೆ ರೂ. 1ಕೋಟಿ ವೆಚ್ಚದಲ್ಲಿ ಆಕ್ಸಿಜೆನ್ ಪ್ಲ್ಯಾಂಟ್

ಪುತ್ತೂರು: ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ವತಿಯಿಂದ ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೂ. 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಆಕ್ಸಿಜನ್ ಘಟಕದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಮುಂದಿನ ಕೆಲವೇ ದಿನಗಳಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಕೋವಿಡ್ ಎರಡನೆ ಅಲೆ ಸಂದರ್ಭದಲ್ಲಿ ಎಲ್ಲೆಡೆ ರೋಗಿಗಳಿಗೆ ಆಕ್ಸಿಜೆನ್ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಮನವಿ ಮೇರೆಗೆ ಕ್ಯಾಂಪ್ಕೋ ಸಂಸ್ಥೆ ಘಟಕ ನಿರ್ಮಾಣದ ಭರವಸೆ ನೀಡಿದ್ದು, ಇದೀಗ ಯಂತ್ರವು ಪುತ್ತೂರಿಗೆ ಆಗಮಿಸಿದೆ.
ತಮಿಳುನಾಡಿನ ಕೊಯಮತ್ತೂರಿನ ಸಮಿಟ್ಸ್ ಹೈಗ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಮೂಲಕ ಫ್ಲ್ಯಾಂಟ್ ತಯಾರಿ ಕೆಲಸ ನಡೆಯುತ್ತಿದೆ. ಕಂಪೆನಿಯಲ್ಲಿಯೇ ನಿರ್ಮಾಣ ಕಾರ್ಯ ಆಗಿದ್ದು ಎನ್ನಲಾದ ಆಕ್ಸಿಜನ್ ಯಂತ್ರ ಪುತ್ತೂರಿಗೆ ತಲುಪಿದೆ. ಫ್ಲ್ಯಾಂಟ್ ಬಿಡಿಭಾಗಗಳು ಮತ್ತು ಟ್ಯಾಂಕ್ ಪುತ್ತೂರಿನ ಸರಕಾರಿ ಆಸ್ಪತ್ರೆ ವಠಾರದಲ್ಲಿ ನಿಗದಿಪಡಿಸಲಾದ ಸ್ಥಳದಲ್ಲಿ ಅಳವಡಿಸಲಾಗುತ್ತದೆ.
ಆಕ್ಸಿಜನ್ ಫ್ಲಾಂಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲಿದ್ದ ಹಳೆ ಸಬ್‍ಜೈಲ್ ಜಾಗವನ್ನು ಸಮತಟ್ಟು ಕಾಮಗಾರಿ ನಡೆಸಲಾಗಿದ್ದು, ಕಾಮಗಾರಿ ಪೂರ್ಣಗೊಂಡಿದೆ. ಘಟಕ ಸ್ಥಾಪನೆಯ ನೀಲ ನಕಾಶೆಯಂತೆ 600 ಚದರಡಿ ವಿಸ್ತೀರ್ಣದಲ್ಲಿ 3 ಮೀಟರ್ ಎತ್ತರದ ಘಟಕ ನಿರ್ಮಾಣಗೊಳ್ಳಲಿದೆ. ಛಾವಣಿ ಸೇರಿದರೆ ಎತ್ತರ 5 ಮೀಟರ್‍ನಷ್ಟಿರಲಿದೆ.
ಪ್ರತಿ ಗಂಟೆಗೆ 27 ಮೀಟರ್ ಕ್ಯೂಬ್ ಆಕ್ಸಿಜೆನ್ ಉತ್ಪಾದನೆ ಮಾಡುವ ಸಾಮಥ್ರ್ಯ ಈ ಘಟಕ ಹೊಂದಿರಲಿದೆ. 100 ಕ್ಕಿಂತ ಅಧಿಕ ಜಂಬೋ ಸಿಲಿಂಡರ್‍ನಷ್ಟು ಗ್ಯಾಸ್ ರೂಪದ ಆಮ್ಲಜನಕವು ಇದರಿಂದ ದೊರೆಯಲಿದೆ. ಟ್ಯಾಂಕ್‍ನಲ್ಲಿ ಸಂಗ್ರಹಗೊಂಡ ಆಮ್ಲಜನಕವನ್ನು ರೆಡ್ಯೂಸ್‍ಡ್ ಪ್ರೆಶರ್‍ನಲ್ಲಿ ಪ್ರತಿ ಬೆಡ್‍ಗೆ ಫ್ಲೋ ಮೀಟರ್ ಮೂಲಕ ಪೂರೈಸಲಾಗುತ್ತದೆ. ಪ್ರತಿ ಬೆಡ್‍ಗೆ ಅಗತ್ಯವಿರುವ ಹಾಗೆ ರೆಗ್ಯೂಲೇಟರ್ ಅಳವಡಿಸಲಾಗುತ್ತದೆ. ಘಟಕ ಸ್ಥಾಪನೆ ಬಳಿಕ ನಿತ್ಯ ನಿರ್ವಹಣೆ ಬಗ್ಗೆ ಆಸ್ಪತ್ರೆ ಸಿಬಂದಿಗಳಿಗೆ ಕಂಪೆನಿ ತರಬೇತಿ ನೀಡಲಿದೆ.
ಈಗಾಗಲೇ 100 ಬೆಡ್ ಸಾಮಥ್ರ್ಯದ ತಾಲೂಕು ಸರಕಾರಿ ಆಸ್ಪತ್ರೆಯನ್ನು 300 ಬೆಡ್‍ಗೆ ಏರಿಸುವ ಪ್ರಸ್ತಾವನೆಯನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಲಾಗಿದೆ. ಸುಮಾರು 20 ಕೋ.ರೂ. ವೆಚ್ಚದಲ್ಲಿ ಆರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಲಾಗಿದೆ. ಇಡೀ ಆಸ್ಪತ್ರೆಗೆ ಕ್ಯಾಂಪಸ್ ರೂಪ ನೀಡುವ ಸಲುವಾಗಿ ಆಸ್ಪತ್ರೆಗೆ ತಾಗಿಕೊಂಡಿರುವ ಇರುವ ವಿವಿಧ ಇಲಾಖೆಗಳ ಖಾಲಿ ಜಾಗವನ್ನು ಆಸ್ಪತ್ರೆ ಹೆಸರಿಗೆ ವರ್ಗಾಯಿಸಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡಲ್ಲಿ ಒಟ್ಟು 5.5 ಎಕ್ರೆ ಜಾಗ ಹೊಂದಿರುವ ಜಿಲ್ಲೆಯ ಮೊದಲ ಆಸ್ಪತ್ರೆ ಇದಾಗಲಿದೆ.







