ಅಸ್ಸಾಮಿನಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿಗಾಗಿ ರಾಹುಲ್ ರನ್ನು ಸಂಪರ್ಕಿಸಿದ ಅಖಿಲ್ ಗೊಗೊಯಿ

photo : twitter
ಗುವಾಹಟಿ,ಸೆ.2: ಕಾಂಗ್ರೆಸ್ ನೊಂದಿಗೆ ತನ್ನ ರೈಜೋರ್ ದಳದ ಮೈತ್ರಿಗಾಗಿ ಶಾಸಕ ಅಖಿಲ್ ಗೊಗೊಯಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಅಸ್ಸಾಮಿನಲ್ಲಿ ಈಗಾಗಲೇ ದುರ್ಬಲಗೊಂಡಿರುವ ಕಾಂಗ್ರೆಸ್ ಅಲ್ಪಸಂಖ್ಯಾತರ ಆಧರಿತ ಪಕ್ಷವಾಗಿರುವ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್)ನ ನಾಯಕರು ಆಡಳಿತ ಬಿಜೆಪಿ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ಓಲೈಸುವುದನ್ನು ಪ್ರತಿಭಟಿಸಿ ಅದರೊಂದಿಗಿನ ತನ್ನ ಮೈತ್ರಿಯನ್ನು ಇತ್ತೀಚಿಗೆ ಕಡಿದುಕೊಂಡಿದೆ.
ಕಾಂಗ್ರೆಸ್ ಮತ್ತು ಎಐಯುಡಿಎಫ್ ಪ್ರತಿಪಕ್ಷ ಮೈತ್ರಿಕೂಟ ‘ಮಹಾಜೋತ್’ನ ಎರಡು ಪ್ರಮುಖ ಪಕ್ಷಗಳಾಗಿದ್ದವು. ಬಿಜೆಪಿಯನ್ನು ಸೋಲಿಸಲು ಕಳೆದ ಚುನಾವಣೆಗಳ ಮುನ್ನ ಈ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಿತ್ತು.
ರೈಜೋರ್ ದಳದ ಜೊತೆ ಮೈತ್ರಿಗೆ ರಾಜ್ಯ ಕಾಂಗ್ರೆಸ್ ನಾಯಕತ್ವ ವಿರುದ್ಧವಾಗಿದ್ದು,ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಆದರೂ ಮೈತ್ರಿಗಾಗಿ ಪ್ರಯತ್ನಿಸುತ್ತಿರುವ ಗೊಗೊಯಿ ರಾಹುಲ್ ರನ್ನು ಭೇಟಿಯಾಗಿದ್ದಾರೆ.
‘ನಾನು ರಾಹುಲ್ ಗಾಂಧಿ ಮತ್ತು ಮುಕುಲ್ ವಾಸ್ನಿಕ್ ಅವರನ್ನು ಭೇಟಿಯಾಗಿದ್ದು,ದೇಶದ ಒಕ್ಕೂಟ ಸ್ವರೂಪದ ಮರುಸ್ಥಾಪನೆಗಾಗಿ ನಾವು (ಪ್ರತಿಪಕ್ಷಗಳು) ಹೇಗೆ ಹೋರಾಡಬಹುದು ಎನ್ನುವುದರ ಬಗ್ಗೆ ಹಾಗೂ ಇತ್ತೀಚಿಗೆ ನಡೆದ ಅಸ್ಸಾಂ ಚುನಾವಣೆಗಳು ಮತ್ತು ಮುಂಬರುವ ಉಪಚುನಾವಣೆಗಳ ಬಗ್ಗೆ ನಾವು ಚರ್ಚಿಸಿದ್ದೇವೆ ’ ಎಂದು ರೈಜೋರ್ ದಳದ ಏಕೈಕ ಶಾಸಕರಾಗಿರುವ ಗೊಗೊಯಿ ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ ಹೈಕಮಾಂಡ್ ಮೈತ್ರಿಯ ಪರವಾಗಿರುವುದರಿಂದ ರಾಜ್ಯ ನಾಯಕತ್ವವು ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅದು ಹಾಗೆ ಮಾಡಿದರೆ ಅಸ್ಸಾಮಿನಲ್ಲಿ ಬಿಜೆಪಿಯು ನಿರ್ನಾಮವಾಗಲಿದೆ ಎಂದು ಅವರು ಹೇಳಿದರು.







