ಎರಡನೇ ಅಲೆ ಇನ್ನೂ ಮುಗಿದಿಲ್ಲ, ಸಮಾವೇಶಗಳಲ್ಲಿ ಪಾಲ್ಗೊಳ್ಳುವ ಮುನ್ನ ಸಂಪೂರ್ಣ ಲಸಿಕೆ ಪಡೆದಿರುವುದು ಕಡ್ಡಾಯ: ಸರಕಾರ

photo: PTI
ಹೊಸದಿಲ್ಲಿ,ಸೆ.2: ಸಾಮೂಹಿಕ ಸಮಾವೇಶಗಳನ್ನು ಉತ್ತೇಜಿಸಕೂಡದು,ಆದರೆ ಸಮಾವೇಶಗಳಲ್ಲಿ ಭಾಗವಹಿಸುವುದು ಅಗತ್ಯವಾಗಿದ್ದರೆ ಸಂಪೂರ್ಣ ಲಸಿಕೆ ಪಡೆದಿರುವುದು ಅಗತ್ಯವಾಗಿರುತ್ತದೆ ಎಂದು ಹೇಳಿರುವ ಕೇಂದ್ರ ಸರಕಾರವು, ಲಸಿಕೆಯನ್ನು ಪಡೆಯುವಂತೆ ಮತ್ತು ವಿಶೇಷವಾಗಿ ಹಬ್ಬಗಳ ಋತುವಿನಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಜನರನ್ನು ಆಗ್ರಹಿಸಿದೆ.
ಸಾಪ್ತಾಹಿಕ ಕೋವಿಡ್ ಪಾಸಿಟಿವಿಟಿ ದರವು ಒಟ್ಟಾರೆ ಇಳಿಕೆ ಪ್ರವೃತ್ತಿಯನ್ನು ತೋರಿಸುತ್ತಿದೆಯಾದರೂ ದೇಶದಲ್ಲಿ ಸಾಂಕ್ರಾಮಿಕದ ಎರಡನೇ ಅಲೆ ಇನ್ನೂ ಅಂತ್ಯಗೊಂಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆಯನ್ನು ನೀಡಿದ ಸರಕಾರವು, ಆ.31ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ 39 ಜಿಲ್ಲೆಗಳಲ್ಲಿ ಶೇ.10ಕ್ಕೂ ಹೆಚ್ಚಿನ ಸಾಪ್ತಾಹಿಕ ಪಾಸಿಟಿವಿಟಿ ದರ ದಾಖಲಾಗಿದೆ ಮತ್ತು 38 ಜಿಲ್ಲೆಗಳಲ್ಲಿ ಅದು ಶೇ.5 ಮತ್ತು ಶೇ.10ರ ನಡುವೆ ಇದೆ ಎಂದು ತಿಳಿಸಿತು.
ದೇಶದ ಶೇ.16ರಷ್ಟು ಜನಸಂಖ್ಯೆಗೆ ಲಸಿಕೆಯ ಎರಡೂ ಡೋಸ್ಗಳನ್ನು ನೀಡಲಾಗಿದ್ದು,ಶೇ.54ರಷ್ಟು ಜನರು ಕನಿಷ್ಠ ಮೊದಲ ಡೋಸ್ನ್ನು ಪಡೆದಿದ್ದಾರೆ. ಸಿಕ್ಕಿಂ,ದಾದ್ರಾ ಮತ್ತು ನಗರ ಹವೇಲಿ,ಹಿಮಾಚಲ ಪ್ರದೇಶಗಳಲ್ಲಿ ಎಲ್ಲ ವಯಸ್ಕರು ಕನಿಷ್ಠ ಮೊದಲ ಡೋಸ್ ಅನ್ನು ಸ್ವೀಕರಿಸಿದ್ದಾರೆ ಎಂದು ತಿಳಿಸಿದ ಸರಕಾರವು,ಮೂರನೇ ಅಲೆ ಅಪ್ಪಳಿಸುವ ಭೀತಿಯ ನಡುವೆಯೇ ಹಬ್ಬಗಳ ಋತುವು ಬರುತ್ತಿದೆ. ಜನರು ಸೇರುವುದನ್ನು ನಿರುತ್ತೇಜಿಸಬೇಕಿದೆ ಮತ್ತು ಇಂತಹ ಸಮಾವೇಶದಲ್ಲಿ ಪಾಲ್ಗೊಳ್ಳುವಿಕೆಯು ಅಗತ್ಯವಾಗಿದ್ದರೆ ಸಂಪೂರ್ಣ ಡೋಸ್ ಪಡೆದಿರುವುದು ಕಡ್ಡಾಯವಾಗಬೇಕು. ಜನರು ತಮ್ಮ ಮನೆಗಳಲ್ಲಿಯೇ ಹಬ್ಬಗಳನ್ನು ಆಚರಿಸಬೇಕು,ಕೋವಿಡ್ ನಿಯಮಗಳನ್ನು ಪಾಲಿಸಬೇಕು ಮತ್ತು ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಅದು ತಿಳಿಸಿತು.
ದೇಶದಲ್ಲಿ ಈವರೆಗೆ ಕೊರೋನವೈರಸ್ನ ಡೆಲ್ಟಾ ಪ್ಲಸ್ ರೂಪಾಂತರಿಯ ಸುಮಾರು 300 ಪ್ರಕರಣಗಳು ಪತ್ತೆಯಾಗಿವೆ ಎಂದೂ ಸರಕಾರವು ತಿಳಿಸಿತು.







