ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಎಸ್‍ಸಿ, ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆಯಡಿ 5,422 ಪ್ರಕರಣ ದಾಖಲು

ಬೆಂಗಳೂರು, ಸೆ.2: ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಎಸ್‍ಸಿ, ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಒಟ್ಟು 5,422 ಪ್ರಕರಣಗಳು ದಾಖಲಾಗಿವೆ. ರಾಜ್ಯ ಸರಕಾರ ನೀಡಿರುವ ಅಂಕಿ-ಅಂಶಗಳನ್ನು ಗಮನಿಸಿದರೆ ದಲಿತರ ಮೇಲಿನ ದೌರ್ಜನ್ಯಗಳು ನಿಯಂತ್ರಣ ಆಗದೆ ಇರುವುದು ಸ್ಪಷ್ಟಗೊಳ್ಳುತ್ತಿವೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ಅಂಕಿ ಅಂಶಗಳು ಹೀಗಿವೆ. 2019ರಲ್ಲಿ ಎಸ್‍ಸಿಗಳ ಮೇಲೆ 1,247 ದೌರ್ಜನ್ಯ ಪ್ರಕರಣಗಳು ನಡೆದಿವೆ. ಎಸ್‍ಟಿಗಳ ಮೇಲೆ 291 ಪ್ರಕರಣಗಳು ನಡೆದಿದ್ದು, ಒಟ್ಟು 1538 ಪ್ರಕರಣಗಳು ದಾಖಲಾಗಿವೆ.
2020ರಲ್ಲಿ ಎಸ್‍ಸಿ, ಎಸ್‍ಟಿ ದೌರ್ಜನ್ಯ ಕಾಯ್ದೆಯಡಿಯಲ್ಲಿ ಒಟ್ಟು 1,568 ಪ್ರಕರಣಗಳು ದಾಖಲಾಗಿವೆ. 2021 ಜುಲೈವರೆಗೆ ಎಸ್‍ಸಿಗಳ ಮೇಲೆ 872 ದೌರ್ಜನ್ಯ ಪ್ರಕರಣಗಳು ನಡೆದರೆ, ಎಸ್‍ಟಿಗಳ ಮೇಲೆ 197 ದೌರ್ಜನ್ಯ ಪ್ರಕರಣಗಳು ನಡೆದಿವೆ. ಒಟ್ಟು 1069 ಪ್ರಕರಣಗಳು ದಾಖಲಾಗಿವೆ.
ಎಸ್‍ಸಿ, ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ದಾಖಲಾದ 5,422 ಪ್ರಕರಣಗಳ ಪೈಕಿ 2019ರಲ್ಲಿ 1,207 ಪ್ರಕರಣಗಳಲ್ಲಿ ಚಾರ್ಜ್‍ಶೀಟ್ ಹಾಕಲಾಗಿದೆ. 2020ರಲ್ಲಿ 1,230 ಹಾಗೂ 2021ರಲ್ಲಿ 517 ಪ್ರಕರಣಗಳಲ್ಲಿ ಚಾರ್ಜ್‍ಶೀಟ್ ಹಾಕಲಾಗಿದೆ. 2019ರಲ್ಲಿ 52 ಪ್ರಕರಣಗಳು ತನಿಖಾ ಹಂತದಲ್ಲಿದ್ದರೆ, 2020 ರಲ್ಲಿ 84 ಹಾಗೂ 2021ರಲ್ಲಿ 573 ಪ್ರಕರಣಗಳು ತನಿಖಾ ಹಂತದಲ್ಲಿವೆ.
ಶೇಕಡಾವಾರು ಲೆಕ್ಕಾಚಾರದ ಪ್ರಕಾರ ಎಸ್‍ಸಿ ದೌರ್ಜನ್ಯ ಪ್ರಕರಣಗಳಲ್ಲಿ 2019ರಲ್ಲಿ ಶೇ. 78.13, 2020ರಲ್ಲಿ ಶೇ. 80.37, 2021ರಲ್ಲಿ ಶೇ. 48.97 ಪ್ರಕರಣಗಳಲ್ಲಿ ಚಾರ್ಜ್‍ಶೀಟ್ ದಾಖಲಾಗಿವೆ. ಎಸ್‍ಟಿ ದೌರ್ಜನ್ಯ ಪ್ರಕರಣಗಳ ಪೈಕಿ 2019ರಲ್ಲಿ ಶೇ. 84.72, 2020ರಲ್ಲಿ ಶೇ. 82.52 ಹಾಗೂ 2021 ರಲ್ಲಿ ಶೇ. 59.88 ಪ್ರಕರಣಗಳಲ್ಲಿ ಚಾರ್ಜ್‍ಶೀಟ್ ದಾಖಲಾಗಿವೆ.
ಎಸ್‍ಸಿ, ಎಸ್‍ಟಿಗಳ ಮೇಲೆ ಕಳೆದ ಮೂರು ವರ್ಷಗಳಲ್ಲಿ ನಡೆದ ಗಂಭೀರ ಸ್ವರೂಪದ ದೌರ್ಜನ್ಯಗಳು ಕೂಡಾ ನಿಯಂತ್ರಣಕ್ಕೆ ಬಂದಿಲ್ಲ. 2019 ರಲ್ಲಿ 76 ಕೊಲೆ ಪ್ರಕರಣಗಳು ನಡೆದರೆ, 114 ಅತ್ಯಾಚಾರ, 424 ಗುಂಪು ಘರ್ಷಣೆ ಹಾಗೂ ಇತರ 872 ಅಪರಾಧ ಪ್ರಕರಣಗಳು ಸೇರಿ ಒಟ್ಟು 1,486 ಪ್ರಕರಣಗಳು ದಾಖಲಾಗಿವೆ.
2020ರಲ್ಲಿ 87 ಕೊಲೆ, 130 ಅತ್ಯಾಚಾರ ಜೊತೆಗೆ ಇತರ ಪ್ರಕರಣಗಳು ಸೇರಿ ಒಟ್ಟು 1484 ಪ್ರಕರಣಗಳು ದಾಖಲಾಗಿವೆ. ಇನ್ನು 2021ರಲ್ಲಿ 71 ಕೊಲೆ, 81 ಅತ್ಯಾಚಾರ, 311 ದೊಂಬಿ ಸೇರಿ ಒಟ್ಟು 901 ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿದೆ.







