ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಸಿಗಲಿ: ಸಂಸದ ವಿ.ಶ್ರೀನಿವಾಸ್ ಪ್ರಸಾದ್

ಸಂಸದ ವಿ.ಶ್ರೀನಿವಾಸ್ ಪ್ರಸಾದ್
ಮೈಸೂರು: ಸಂವಿಧಾನ ಜಾರಿಗೊಂಡು ಇಷ್ಟು ವರ್ಷಗಳೆ ಕಳೆದರೂ ಜಾತಿಯತೆ, ಮೌಡ್ಯ, ತಾರತಮ್ಯ ನೀತಿ ಹೋಗಿಲ್ಲ. ಹೀಗಾಗಿ ಅವೆಲ್ಲವೂ ಹೋಗುವ ಸಲುವಾಗಿ ಖಾಸಗಿ ಕ್ಷೇತ್ರಗಳಲ್ಲಿಯೂ ಮೀಸಲಾತಿ ನೀಡಬೇಕಿದೆ ಎಂದು ಸಂಸದ ವಿ.ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣಾ ಕೇಂದ್ರವು ವಿಶ್ವಜ್ಞಾನಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ `ಹೋರಾಟದ ಸಾಗರಕ್ಕೆ ಸಾವಿಲ್ಲದ ನದಿ; ಡಾ.ಸಿದ್ಧಲಿಂಗಯ್ಯ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಸಂವಿಧಾನವನ್ನು ವಿಶ್ವವೇ ಒಪ್ಪಿಕೊಂಡಿದೆ. ಅದನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಇಂತಹ ಅತ್ಯುತ್ತಮವಾದ ಸಂವಿಧಾನವನ್ನು ಇಟ್ಟುಕೊಂಡಿದ್ದರೂ ಪ್ರತಿಯೊಬ್ಬರಿಗೂ ಶಿಕ್ಷಣ ಕೊಡಲು ಆಗಿಲ್ಲ. ದೇಶದಲ್ಲಿ ಸಮಾನತೆ, ಮೂಡನಂಬಿಕೆ, ಜಾತೀಯತೆ ಯಾಕೆ ಹೋಗಿಲ್ಲ. ಆರ್ಟಿಕಲ್ 16ರಲ್ಲಿ ಇರುವ ಹಕ್ಕು ಇದುವರೆವಿಗೂ ಸಿಕ್ಕಿಲ್ಲ. ಅವೆಲ್ಲಾ ದೊರಕುವವರೆಗೂ ಖಾಸಗೀಕರಣದಲ್ಲಿಯೂ ಮೀಸಲಾತಿ ಕಲ್ಪಿಸಬೇಕಿದೆ ಎಂದರು.
ಸಂಸತ್ ಹಾಗೂ ವಿಧಾನಸಭೆಯಲ್ಲಿ ಮೀಸಲಾತಿಯಿದ್ದು, ರಾಜ್ಯಸಭೆಗೂ ಮೀಸಲಾತಿ ಕೊಡಿ ಎಂದಿದ್ದೇವು. ವೆಂಕಟಾಚಲಯ್ಯ ಅವರ ಎದುರು ಹೇಳಿದ್ದೇವು. ಇಂದು ಶಿಕ್ಷಣದೊಂದಿಗೆ ಜ್ಞಾನವೂ ಬೇಕು. ಅದನ್ನೂ ರೂಢಿಸಿಕೊಂಡರೆ ಎನೂ ಬೇಕಾದರೂ ಸಾಧನೆ ಮಾಡಬಹುದು. ನನಗಿಂತ ಚಿಕ್ಕವರಾಗಿದ್ದರೂ ಸಿದ್ದಲಿಂಗಯ್ಯ ಅವರು ಮಾರ್ಗದರ್ಶಕರಾಗಿದ್ದರು. ಅಂತಹವರ ಚಿಂತನೆಗಳನ್ನು ರೂಢಿಸಿಕೊಳ್ಳಬೇಕಿದೆ. ಅಂತಹವರ ಆದರ್ಶವನ್ನು ರೂಢಿಸಿಕೊಂಡು ಸಮಾಜ ಬದಲಾವಣೆಗೂ ಪ್ರಯತ್ನಿಸಿದಾಗ ಮಾತ್ರ ನಿಜವಾದ ರೀತಿಯಲ್ಲಿ ಸಿದ್ದಲಿಂಗಯ್ಯ ಅವರಿಗೆ ನುಡಿ ನಮನ ಸಲ್ಲಿಸಿದಂತೆ ಆಗಲಿದೆ. ಪ್ರತಿಮೆಯನ್ನು ಬೇಕಿದ್ದರೆ ಅವರು ವಿದ್ಯಾಭ್ಯಾಸ ಕಲಿತ ವಿವಿಯಲ್ಲಿ ಮಾಡಲಿ. ಅಲ್ಲದೆ, ಅಲ್ಲೂ ಒಂದು ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಿ. ಆದರೆ, ಇಲ್ಲಿ ಅವರ ಚಿಂತನೆಯನ್ನು ಒಳಗೊಂಡ ಸಮಾನ ಮನಸ್ಕರು ಸೇರಿ ಪ್ರತಿಷ್ಠಾನ ಮಾಡಿ, ನಾನು ಸಹಾಯ ಮಾಡುವೆ ಎಲ್ಲರೂ ಸೇರಿ ಮಾಡಿದರೆ ನಿಜಕ್ಕೂ ಸಾರ್ಥಕ ಆಗಲಿದೆ ಎಂದರು.
ದಿವಂಗತ ಡಾ.ಸಿದ್ದಲಿಂಗಯ್ಯರವರು ಇಷ್ಟು ಬೇಗ ದೂರ ಆಗುತ್ತಾರೆಂದು ನಾವು ನಿರೀಕ್ಷೆ ಮಾಡಿರಲಿಲ್ಲ. ಸಾಹಿತಿಗಳಾಗಿ, ದಲಿತ ಕಾಂತ್ರಿಕಾರಿ ಕವಿಗಳಾಗಿ, ದಲಿತ ಸಾಹಿತ್ಯಕ್ಕೆ ಹೆಸರಾಂತ ಕವಿಗಳಾಗಿದ್ದರು. ದಲಿತ ಹೋರಾಟ ಪ್ರಾರಂಭ ವಾಗಿದ್ದು ಮಹಾರಾಷ್ಟ್ರದಲ್ಲಿಯಾಗಿದೆ.
ಡಾ.ಸಿದ್ದಲಿಂಗಯ್ಯ ನರಕಯಾತನೆ, ದೌರ್ಜನ್ಯ, ದಬ್ಬಾಳಿಕೆ ಯಾವುದೇ ದೇಶಗಳಲ್ಲಿ ಕಾಣದಂತಹದ್ದನ್ನು ಅನುಭವಿಸಿ ಬರೆಯುತ್ತಿದ್ದರು. ಅಸ್ಪೃಶ್ಯತೆಯ ಬಗ್ಗೆ ಮೊಟ್ಟಮೊದಲು ಬರೆದಿದ್ದು ಶಿವರಾಮ ಕಾರಂತರಾಗಿದ್ದು, ಮೈಸೂರು ನಗರದಲ್ಲಿ ಅಶೋಕ ಪುರಂನಲ್ಲಿ ನಾವು ಯಾವುದೇ ಅಸ್ಪೃಶ್ಯತೆಯ ಅರಿವು ಇಲ್ಲದೆ ಬೆಳೆದವರು ಎಂದು ಸ್ಮರಿಸಿಕೊಂಡರು.
ದಲಿತ ಸಂಘರ್ಷ ಸಮಿತಿಯಲ್ಲಿ ಸ್ಪಷ್ಟವಾಗಿ ಹೇಳಿದ್ದರು ಯಾವುದೇ ರಾಜಕೀಯ ವ್ಯಕ್ತಿಗಳು ಇರಬಾರದು ಅನ್ನುವ ಕಾರಣಕ್ಕಾಗಿ ನಾನು ಅಂದು ಹೊರಬಂದೆ. ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ಅವರ ಅಂತಿಮ ದರ್ಶನಕ್ಕೆ ಹೋಗಲಾಗಲಿಲ್ಲ. ಅಂತ್ಯಕ್ರಿಯೆ ಸಹ ಬೌದ್ಧ ಧರ್ಮದ ಪ್ರಕಾರವಾಗಿ ನಡೆದಿರುತ್ತದೆ. ಶಿಕ್ಷಣಕ್ಕೆ ಮೊದಲು ಆಧ್ಯತೆ ನೀಡಿ ಎಂದು ನಾನು ಮೈಸೂರು ವಿಶ್ವವಿದ್ಯಾನಿಲಕ್ಕೆ ಹೇಳುತ್ತಿದ್ಧೇನೆ. ಆದರೆ, ಇನ್ನೂ ಮಾಡುತ್ತಿಲ್ಲ. ಅಂತಹ ಚಟುವಟಿಕೆ ನಡೆಯುತ್ತಿಲ್ಲ ಅನ್ನುವುದು ವಿಷಾದನೀಯ ಎಂದರು.
ನ್ಯೂ ಎಜುಕೇಶನ್ ಪಾಲಿಸಿಯಲ್ಲಿ ಸ್ಕಿಲ್ ಡೆವಲಪ್ಮೆಂಟ್ ಅವಕಾಶಗಳನ್ನು ಮಾಡಿಕೊಟ್ಟಿದ್ದಾರೆ ಇದನ್ನು ಪ್ರತಿಯೊಂದು ವಿದ್ಯಾರ್ಥಿಗಳು ರೂಡಿಸಿ ಕೊಳ್ಳಬೇಕು. ಆಕಸ್ಮಿಕವಾಗಿ ಹುಟ್ಟಿದರೂ ಸಾವು ಖಚಿತ ಆದರೆ ಹುಟ್ಟು ಸಾವಿನ ಮಧ್ಯ ಅವರ ಹೋರಾಟ ನಮಗೆ ಮಾರ್ಗದರ್ಶನ ನೀಡುತ್ತದೆ. ಅಂಬೇಡ್ಕರ್ ರವರು ಕನಸನ್ನು ನನಸು ಮಾಡುವ ಮೂಲಕ ಹೋರಾಟ ನಡೆಸಿದ್ದರು. ಅದಕ್ಕೆ ಅವರು ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೆಚ್ಚು ಒತ್ತು ನೀಡಿದರು. ಆದ್ದರಿಂದ ಅಂಬೇಡ್ಕರ್ ರವರನ್ನು ಓದುವ ರಾಕ್ಷಸ ಎಂದು ಸಹ ಕರೆಯುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡದೆ, ಬೇರೆಲ್ಲ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಹಾದಿ ತಪ್ಪುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ವಿದ್ಯಾರ್ಥಿಗಳು ಓದುವುದನ್ನೊಂದು ಬಿಟ್ಟು ಮಿಕ್ಕ ಎಲ್ಲಾ ಕೆಲಸವನ್ನು ಮಾಡುತ್ತಾರೆ. ಅಕಾಡೆಮಿಕ್ ವಿಷಯದಲ್ಲಿ ಆಸಕ್ತಿ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಕ್ರೀಡೆ-ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೇ ಇಲ್ಲ. ಶಿಸ್ತಿನ ಕೊರೆತೆ ಕಾಣುತ್ತಿದೆ. ಒಂದು ರೀತಿ ದುಂಬಿಗಳಂತೆ ಆಗಿಬಿಟ್ಟಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ತದನಂತರ ಹೋರಾಟ ಮತ್ತಿತರರ ಚಟುವಟಿಕೆಗಳು ಎಂದರು.
ಡಾ.ಅಂಬೇಡ್ಕರ್ ಅವರು ಸಮುದಾಯವನ್ನು ಉದ್ಧಾರ ಮಾಡಬೇಕಾದರೇ ಶಿಕ್ಷಣದಿಂದಲೇ ಸಾಧ್ಯ ಎಂದು ಬಲವಾಗಿ ನಂಬಿದ್ದರು.ಅದಕ್ಕಾಗಿಯೇ ಅವರು ಯಾವ ಕಡೆಗೂ ಗಮನಹರಿಸದೇ ದಿನಕ್ಕೆ ಎಷ್ಟು ಗಂಟೆ ಅಧ್ಯಯನದಲ್ಲಿ ತೊಡಗಬಹುದೋ ಅಷ್ಟೂ ಹೊತ್ತು ಓದುತ್ತಿದ್ದರು. ಇಂತಹ ನಡವಳಿಕೆಯನ್ನು ಇಂದಿನ ವಿದ್ಯಾರ್ಥಿಗಳು ರೂಪಿಸಿಕೊಳ್ಳಬೇಕು. ಸಮಾಜವನ್ನು ಅಭಿವೃದ್ಧಿಗೊಳಿಸುವತ್ತ ಗಮನಹರಿಸಬೇಕು ಎಂದು ಕಿವಿಮಾತನ್ನು ಹೇಳಿದರು.
ಈಗಿನ ವಿದ್ಯಾರ್ಥಿಗಳು ಎಂಎ, ಪಿಎಚ್ಡಿ ಪದವಿ ಪಡೆದುಕೊಂಡಿದ್ದರೂ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಕೆಲಸ ಮಾಡಲು ಹೆದರಿ ನಡುಗುತ್ತಾರೆ. ಯಾವುದಾದರೂ ಕಚೇರಿಯಲ್ಲಿ ಗುಮಾಸ್ತನ ಕೆಲಸ ಸಾಕು ಎನ್ನುತ್ತಾರೆ ವಿದ್ಯಾರ್ಥಿಗಳ ಈ ಧೋರಣೆಯನ್ನು ನಿರ್ಮೂಲನೆಗೊಳಿಸಲು ಕೌಶಲ್ಯ ಅಭಿವೃದ್ಧಿ ತರಬೇತಿ ಕೊಡಿಸುವ ಅವಶ್ಯಕತೆ ಇದೆ. ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಇಂತಹದೊಂದು ಯೋಜನೆ ರೂಪಿಸಬಹುದು ಎಂದು ಸಲಹೆ ನೀಡಿದರು. ಸಾಹಿತಿ ಪ್ರೊ.ಕಾಳೇಗೌಡ ನಾಗವಾರ್, ಸಿದ್ದಲಿಂಗಯ್ಯ ಅವರ ಪುತ್ರಿ ಡಾ.ಮಾನಸ ಸಿದ್ದಲಿಂಗಯ್ಯ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರತಿಷ್ಠಾನ ಸ್ಥಾಪಿಸಿ ಅವರ ಆದರ್ಶವನ್ನು ರೂಢಿಸಿಕೊಂಡು ಸಮಾಜ ಬದಲಾವಣೆಗೂ ಪ್ರಯತ್ನಿಸಿದಾಗ ಮಾತ್ರ ನಿಜವಾದ ರೀತಿಯಲ್ಲಿ ಸಿದ್ದಲಿಂಗಯ್ಯ ಅವರಿಗೆ ನುಡಿ ನಮನ ಸಲ್ಲಿಸಿದಂತೆ ಆಗಲಿದೆ. ಪ್ರತಿಮೆಯನ್ನು ಬೇಕಿದ್ದರೆ ಅವರು ವಿದ್ಯಾಭ್ಯಾಸ ಕಲಿತ ವಿವಿಯಲ್ಲಿ ಮಾಡಲಿ. ಅಲ್ಲದೆ, ಅಲ್ಲೂ ಒಂದು ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಿ. ಆದರೆ, ಇಲ್ಲಿ ಅವರ ಚಿಂತನೆಯನ್ನು ಒಳಗೊಂಡ ಸಮನ ಮನಸ್ಕರು ಸೇರಿ ಪ್ರತಿಷ್ಠಾನ ಮಾಡಿ, ನಾನು ಸಹಾಯ ಮಾಡುವೆ ಎಲ್ಲರೂ ಸೇರಿ ಮಾಡಿದರೆ ನಿಜಕ್ಕೂ ಸಾರ್ಥಕ ಆಗಲಿದೆ.
-ವಿ.ಶ್ರೀನಿವಾಸ್ ಪ್ರಸಾದ್, ಸಂಸದ.







