ವಿದೇಶಿ ತಳಿಯ ಗೂಳಿ ಭಾಗವಹಿಸುವುದಕ್ಕೆ ಮದ್ರಾಸ್ ಹೈಕೋರ್ಟ್ ನಿಷೇಧ

ಚೆನ್ನೈ, ಸೆ. 2: ಜಲ್ಲಿಕಟ್ಟುವಿನಲ್ಲಿ ಕೇವಲ ದೇಶಿ ತಳಿಯ ಗೂಳಿಗಳಿಗೆ ಮಾತ್ರ ಭಾಗವಹಿಸುವ ಅವಕಾಶ ನೀಡುವಂತೆ ಮದ್ರಾಸ್ ಉಚ್ಚ ನ್ಯಾಯಾಲಯ ತಮಿಳುನಾಡು ಸರಕಾರಕ್ಕೆ ನಿರ್ದೇಶಿಸಿದೆ. ಬೋಸ್ ಟೌರಸ್ ಅಥವಾ ಕ್ರಾಸ್/ಹೈಬ್ರಿಡ್ ತಳಿಯ ಗೂಳಿಯಂತಹ ವಿದೇಶಿ ತಳಿಗಳ ಭಾಗವಹಿಸುವಿಕೆಗೆ ನ್ಯಾಯಾಲಯ ನಿಷೇಧ ವಿಧಿಸಿದೆ.
ಜಲ್ಲಿಕಟ್ಟುವಿನಲ್ಲಿ ಭಾಗವಹಿಸುವ ಪ್ರತಿ ಗೂಳಿ ಕೂಡ ದೇಶಿ ತಳಿ ಎಂಬುದನ್ನು ಪಶು ಸಂಗೋಪನ ಇಲಾಖೆಯ ಪಶು ವೈದ್ಯರಿಂದ ಪ್ರಮಾಣೀಕರಣೀಕರಿಸಿರಬೇಕು. ನಕಲಿ ಪ್ರಮಾಣ ಪತ್ರ ನೀಡಿದರೆ, ನ್ಯಾಯಾಂಗ ನಿಂದನೆಯಾಗುತ್ತದೆ ಹಾಗೂ ಅವರು ಇಲಾಖಾ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಚೆನ್ನೈಯ ಇ. ಶೇಷನ್ ಅವರು ಸಲ್ಲಿಸಿದ ರಿಟ್ ಅರ್ಜಿಯನ್ನು ಪುಷ್ಕರಿಸಿದ ನ್ಯಾಯಮೂರ್ತಿ ಎನ್. ಕಿರುಬಾಕರನ್ ಹಾಗೂ ಪಿ. ವೇಲುಮುರುಗನ್ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿತು. ಜಲ್ಲಿಕಟ್ಟು, ಮಂಜುವಿರಟ್ಟು, ಊರ್ರಡು, ವಡಮಡು, ವಡಮಂಜಿವಿರಟ್ಟು ಹಾಗೂ ಎರುಡುತ್ತು ವಿಡುದಲ್ ನಂತಹ ಸ್ಪರ್ಧೆಯಲ್ಲಿ ದೇಶಿ ಗೂಳಿಗಳಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದು ಪೀಠ ಸೂಚಿಸಿತು. ದೇಶಿ ತಳಿಗಳಿಂದ ನಷ್ಟ ಉಂಟಾಗುತ್ತಿರುವ ಬಗ್ಗೆ ದೂರುದಾರ ವ್ಯಕ್ತಪಡಿಸಿರುವ ಕಳವಳವನ್ನು ಒಪ್ಪಿಕೊಂಡ ನ್ಯಾಯಾಧೀಶರು, ರೈತರಿಗೆ ಹಾಗೂ ಗೂಳಿ ಮಾಲಿಕರಿಗೆ ಸಬ್ಸಿಡಿ ಅಥವಾ ಉತ್ತೇಜಕವನ್ನು ನೀಡುವ ಮೂಲಕ ಗೂಳಿಯ ಮಾಲಿಕರಿಗೆ ಹಾಗೂ ದೇಶಿ ತಳಿಗಳನ್ನು ಬೆಳೆಸುತ್ತಿರುವ ರೈತರಿಗೆ ಪ್ರೋತ್ಸಾಹ ನೀಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದರು.







