ಜಯಪ್ರಕಾಶ್ ವಿ.ವಿ.ಯ ರಾಜ್ಯಶಾಸ್ತ್ರ ಪಠ್ಯ ಕ್ರಮ ಬದಲಾವಣೆ ಅಸಮರ್ಪಕ, ಅನಪೇಕ್ಷಣೀಯ: ನಿತೀಶ್ ಕುಮಾರ್

ಪಾಟ್ನಾ, ಸೆ. 2: ಬಿಹಾರದ ಜಯ ಪ್ರಕಾಶ್ ವಿಶ್ವವಿದ್ಯಾನಿಲಯದ ರಾಜಕೀಯ ಶಾಸ್ತ್ರದ ಸ್ನಾತಕೋತ್ತರ ಪಠ್ಯಕ್ರಮವನ್ನು ಬದಲಾಯಿಸಿರುವ ಬಗ್ಗೆ ಮಾಜಿ ಬಿಜೆಪಿ ಶಾಸಕ, ಕುಲಾಧಿಪತಿ ಹಾಗೂ ಪ್ರಸಕ್ತ ರಾಜ್ಯಪಾಲ ಫಾಗು ಚೌಹಾನ್ ಅವರನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯಶಾಸ್ತ್ರ ಸ್ನಾತಕೋತ್ತರದ ಹೊಸ ಪಠ್ಯಕ್ರಮದಲ್ಲಿ ಪ್ರಮುಖ ಸಾಮಾಜಿಕ ಹಾಗೂ ರಾಜಕೀಯ ಹೋರಾಟಗಾರರಾಗಿದ್ದ ಲೋಕನಾಯಕ್ ಜಯ ಪ್ರಕಾಶ್ ನಾರಾಯಣ ಹಾಗೂ ರಾಮ ಮನೋಹರ ಲೋಹಿಯ ಆವರಿಗೆ ಸಂಬಂಧಿಸಿದ ಪಠ್ಯವನ್ನು ತೆಗೆದು ಅದರ ಬದಲಿಗೆ ಪಂಡಿತ್ ದೀನ್ ದಯಾಳ್ ಉಪಾದ್ಯಾಯ ಹಾಗೂ ಇತರರ ಪಠ್ಯಗಳನ್ನು ಸೇರಿಸಲಾಗಿದೆ.
ಪಠ್ಯಕ್ರಮದಲ್ಲಿ ಮಾಡಲಾದ ‘ಅಸಮರ್ಪಕ’ ಹಾಗೂ ‘ಅನಪೇಕ್ಷಣೀಯ’ ಬದಲಾವಣೆಯ ಬಗ್ಗೆ ಮುಖ್ಯಮಂತ್ರಿ ಅವರು ಅಸಮಾಧಾನ ವ್ಯಕ್ತಪಡಿಸಿರುವುದನ್ನು ಉಲ್ಲೇಖಿಸಿ ಶಿಕ್ಷಣ ಇಲಾಖೆ ಕಟು ಶಬ್ದಗಳ ಹೇಳಿಕೆ ನೀಡಿದೆ ಹಾಗೂ ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ಪಠ್ಯಕ್ರಮದಲ್ಲಿ ಬದಲಾವಣೆ ಮಾಡಿರುವ ಬಗ್ಗೆ ವಿ.ವಿ.ಯನ್ನು ತರಾಟೆಗೆ ತೆಗೆದುಕೊಂಡಿರುವ ಮುಖ್ಯಮಂತ್ರಿ, ‘‘ಸಂಪ್ರದಾಯವನ್ನು ಅನುಸರಿಸಿಲ್ಲ’’ಹಾಗೂ ಸಾರ್ವಜನಿಕ ನಿಲುವಿಗೆ ವಿರುದ್ಧವಾಗಿರುವ ಈ ಪಠ್ಯಕ್ರಮವನ್ನು ತನ್ನ ಸರಕಾರ ಸ್ವೀಕರಿಸಲಾರದು ಎಂದಿದ್ದಾರೆ.
‘‘ನನ್ನ ಕರ್ಮ ಭೂಮಿಯಲ್ಲಿ 30 ವರ್ಷಗಳ ಹಿಂದೆ ಜೆಪಿಯು ಅನ್ನು ಸ್ಥಾಪಿಸಿದೆ. ಈಗ ಆರ್ಎಸ್ಎಸ್ ಬೆಂಬಲಿತ ಬಿಹಾರ್ ಸರಕಾರ ಹಾಗೂ ಆರೆಸ್ಸೆಸ್ ಮನಸ್ಥಿತಿ ಶ್ರೇಷ್ಟ ಸಮಾಜವಾದಿ ನಾಯಕರ ಚಿಂತನೆಗಳನ್ನು ತೆಗೆದು ಹಾಕಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಸರಕಾರ ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಆರ್ಜೆಡಿಯ ಹಿರಿಯ ನಾಯಕ ಲಾಲು ಪ್ರಸಾದ್ ಯಾದವ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.







