ಅಮೆಝಾನ್ ಗೆ ಲಕ್ಷಗಟ್ಟಲೆ ವಂಚನೆ: ಹರ್ಯಾಣದ ಮೂವರನ್ನು ಬಂಧಿಸಿದ ಉತ್ತರಪ್ರದೇಶ ಪೊಲೀಸರು

ನೋಯ್ಡಾ: ಇ-ಕಾಮರ್ಸ್ ದಿಗ್ಗಜ ಅಮೆಝಾನ್ ಗೆ ಲಕ್ಷಾಂತರ ರೂಪಾಯಿ ವಂಚಿಸಿದ ಹರ್ಯಾಣ ಮೂಲದ ಮೂವರನ್ನು ಉತ್ತರ ಪ್ರದೇಶದ ಸೈಬರ್ ಅಪರಾಧ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಆರೋಪಿಗಳಲ್ಲಿ ಇಬ್ಬರನ್ನು ಫತೇಹಾಬಾದ್ ಹಾಗೂ ಒಬ್ಬನನ್ನು ಹಿಸಾರ್ ನಿಂದ ಬುಧವಾರ ನೋಯ್ಡಾ ಸೈಬರ್ ಕ್ರೈಂ ಪೊಲೀಸ್ ಠಾಣೆಯ ತಂಡ ಬಂಧಿಸಿದೆ ಎಂದು ಅವರು ಹೇಳಿದರು.
"ಆರೋಪಿಯು ಅಮೆಝಾನ್ ವೆಬ್‌ಸೈಟ್‌ನಲ್ಲಿ ನಕಲಿ ಗುರುತನ್ನು ಬಳಸಿ ಹಲವಾರು ಖಾತೆಗಳನ್ನು ಸೃಷ್ಟಿಸಿದ್ದಾನೆ ಹಾಗೂ ಅವುಗಳನ್ನು ವಿವಿಧ ಉತ್ಪನ್ನಗಳನ್ನು ಆರ್ಡರ್ ಮಾಡಲು ಬಳಸಿದ್ದಾನೆ. ಅವರು ಪ್ರಿಪೇಯ್ಡ್ ಆರ್ಡರ್‌ಗಳನ್ನು ನೀಡಿದ್ದಾರೆ" ಎಂದು ಉತ್ತರಪ್ರದೇಶ ಪೋಲಿಸ್ ಹೇಳಿಕೆಯಲ್ಲಿ ತಿಳಿಸಿದೆ.
ಆದಾಗ್ಯೂ, ಸರಕುಗಳನ್ನು ಸ್ವೀಕರಿಸಿದ ನಂತರ ಅವರು ಅಮೆಝಾನ್ ಅನ್ನು ಸಂಪರ್ಕಿಸುತ್ತಾರೆ ಹಾಗೂ ಉತ್ಪನ್ನಗಳು ದೋಷಪೂರಿತವಾಗಿದೆಯೆಂದು ಅಥವಾ ಬೇರೆ ಯಾವುದೋ ನೆಪದಲ್ಲಿ ಮರುಪಾವತಿಯನ್ನು ಕೋರುತ್ತಾರೆ ಎಂದು ಅದು ಹೇಳಿದೆ.
ಅಮೆಝಾನ್ ತನ್ನ ನೀತಿಯ ಪ್ರಕಾರ ತನ್ನ ದೋಷಪೂರಿತ ಉತ್ಪನ್ನವನ್ನು ತೆಗೆದುಕೊಳ್ಳಲು ಹಾಗೂ ಹಣವನ್ನು ಮರುಪಾವತಿಸಲು ತನ್ನ ವಿತರಣಾ ಏಜೆಂಟನನ್ನು ಕಳುಹಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ವಿತರಣಾ ಏಜೆಂಟರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ ಹಾಗೂ ಮೂಲ ಉತ್ಪನ್ನವನ್ನು ಬದಲಿಸುತ್ತಾರೆ. ವಿತರಣಾ ಏಜೆಂಟರು ಈ ಆರ್ಡರ್ ಗಳನ್ನು ತೆಗೆದುಕೊಂಡಿದ್ದಾಗಿ ಡೇಟಾಬೇಸ್‌ನಲ್ಲಿ ಮೋಸದಿಂದ ಗುರುತಿಸುತ್ತಾರೆ ಮತ್ತು ಆರೋಪಿಗಳು ತಮ್ಮ ಅಮೆಝಾನ್ ಖಾತೆಗಳಿಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಲ್ಲಿ ಮರುಪಾವತಿಯನ್ನು ಪಡೆಯುತ್ತಾರೆ. ಮೂವರು ಆರೋಪಿಗಳು ಈ ಉತ್ಪನ್ನಗಳನ್ನು ದಿಲ್ಲಿ-ಎನ್‌ಸಿಆರ್‌ನ ಮಾರುಕಟ್ಟೆಗಳಲ್ಲಿ ಕಡಿಮೆ ದರದಲ್ಲಿ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದರು.







