ಫೋರ್ಬ್ಸ್ ನ ಶ್ರೀಮಂತ ಟೆನಿಸ್ ಆಟಗಾರರ ಪಟ್ಟಿಯಲ್ಲಿ ರೋಜರ್ ಫೆಡರರ್ ಗೆ ಅಗ್ರಸ್ಥಾನ

ಲಂಡನ್: ರೋಜರ್ ಫೆಡರರ್ ಕಳೆದ 12 ತಿಂಗಳಲ್ಲಿ ವಿಶ್ವದ ಅತ್ಯಂತ ಹೆಚ್ಚು ಆದಾಯ ಗಳಿಸಿದ ಟೆನಿಸ್ ಆಟಗಾರರಾಗಿದ್ದರು. ಗಾಯದ ಸಮಸ್ಯೆಯಿಂದಾಗಿ ಟೆನಿಸ್ ಸ್ಪರ್ಧೆಗಳಲ್ಲಿ ಹೆಚ್ಚು ಕಾಣಿಸಿಕೊಳ್ಳದ ಹೊರತಾಗಿಯೂ ಸ್ವಿಸ್ ಮಾಂತ್ರಿಕ ಸುಮಾರು 90.6 ಮಿಲಿಯನ್ ಡಾಲರ್ ಆದಾಯ ಗಳಿಸಿದ್ದರು ಎಂದು ಫೋರ್ಬ್ಸ್ ಗುರುವಾರ ತಿಳಿಸಿದೆ.
ಮೊಣಕಾಲಿನ ಗಾಯದಿಂದಾಗಿ ಈ ವರ್ಷದ ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಿಂದ ಹೊರಗುಳಿದಿರುವ ಫೆಡರರ್, ಟೆನಿಸ್ ಆಟದಿಂದ 1 ಮಿಲಿಯನ್ ಡಾಲರ್ ಗಿಂತ ಕಡಿಮೆ ಆದಾಯ ಗಳಿಸಿದ್ದಾರೆ. ಅವರ ಆದಾಯದ ಬಹುಪಾಲು ವಿವಿಧ ಒಪ್ಪಂದಗಳಿಂದ ಬರುತ್ತದೆ ಎಂದು ಫೋರ್ಬ್ಸ್ ಹೇಳಿದೆ.
ಜಪಾನ್‌ನ ಆಟಗಾರ್ತಿ ನವೋಮಿ ಒಸಾಕಾ( 60.1 ಮಿಲಿಯನ್) ಪಟ್ಟಿಯಲ್ಲಿ ಎರಡನೇ ಅತಿ ಹೆಚ್ಚು ಗಳಿಕೆದಾರರಾಗಿದ್ದಾರೆ. ಒಸಾಕಾ 90 ಶೇ. ಕ್ಕಿಂತ ಹೆಚ್ಚು ಆದಾಯವನ್ನು ಟೆನಿಸ್ ಮೂಲಕವೇ ಗಳಿಸಿದ್ದರು. ಸೆರೆನಾ ವಿಲಿಯಮ್ಸ್, ನೊವಾಕ್ ಜೊಕೊವಿಕ್ ಹಾಗೂ ರಫೆಲ್ ನಡಾಲ್ ಮೊದಲ ಐದು ಸ್ಥಾನಗಳನ್ನು ಪಡೆದಿದ್ದಾರೆ.
ವಿಲಿಯಮ್ಸ್ ಹಾಗೂ ನಡಾಲ್ ಗಾಯದ ಸಮಸ್ಯೆಯಿಂದಾಗಿ ವರ್ಷದ ಅಂತಿಮ ಗ್ರ್ಯಾನ್ ಸ್ಲಾಮ್ ನಿಂದ ಹೊರಗುಳಿದಿದ್ದಾರೆ.





