ಕೇರಳದಿಂದ ಕಾಶ್ಮೀರದವರೆಗೆ ಸೈಕಲ್ ನಲ್ಲಿ ಪ್ರಯಾಣ ಬೆಳೆಸಿದ ಗೆಳೆಯರು

ಉಡುಪಿ, ಸೆ.3: ವಿಶ್ವ ಭ್ರಾತೃತ್ವದ ಸಂದೇಶ ಸಾರುವ ಉದ್ದೇಶದೊಂದಿಗೆ ಕೇರಳದಿಂದ ಕಾಶ್ಮೀರಕ್ಕೆ ಸೈಕಲ್ ನಲ್ಲಿ ಪ್ರಯಾಣ ಹೊರಟ ನಾಲ್ವರು ಗೆಳೆಯರು ಇಂದು ಕುಂದಾಪುರ ತಲುಪಿದ್ದಾರೆ.
ಓರ್ವ ಯುವತಿ ಸೇರಿದಂತೆ ನಾಲ್ವರ ತಂಡ ಕೇರಳದ ಮಲಪ್ಪುರಂನಿಂದ ಸೈಕಲ್ ನಲ್ಲಿ ಆ.28ರಂದು ಹೊರಟಿದ್ದು, ಅ.10ರೊಳಗೆ 3000 ಕಿ.ಮೀ. ದೂರದ ಕಾಶ್ಮೀರ ತಲುಪುವ ಯೋಜನೆ ಹಾಕಿಕೊಂಡು ಯಾನ ಆರಂಭಿಸಿದ್ದಾರೆ.
ತಮ್ಮ ಸಾಹಸ ಯಾನದ ದಾರಿಯಲ್ಲಿ ಸಿಕ್ಕ ಇವರು, ತಮ್ಮ ಸಾಹಸಗಾಥೆಯನ್ನು ವಿವರಿಸಿದರು. ‘ತಮ್ಮ ತಂಡ ದಿನಕ್ಕೆ ಕನಿಷ್ಠ 100 ಕಿ.ಮೀ ಪ್ರಯಾಣಿಸುವ ಗುರಿ ಹೊಂದಿದ್ದು, ಅ.10ರೊಳಗೆ ಕಾಶ್ಮೀರ ತಲುಪುವ ನಿರೀಕ್ಷೆ ಹೊಂದಲಾಗಿದೆ. ವಿಭಿನ್ನ ಸಂಸ್ಕೃತಿ, ಜೀವ ವೈವಿಧ್ಯತೆ, ಪರಿಸರ ವನ್ನು ಹೊಂದಿರುವ ಭಾರತದ ದಕ್ಷಿಣ ತುದಿಯಿಂದ ಉತ್ತರದ ತಲೆಯ ಕಾಶ್ಮೀರದವರೆಗಿನ ವಿಶೇಷತೆಗಳನ್ನು ಅರಿಯುವ ಯತ್ನ ಮಾಡಲಾಗು ವುದು ಎಂದು ಈ ತಂಡದ ಏಕೈಕ ಮಹಿಳಾ ಸಾಹಸಿ ಸಜೀನಾ ತಿಳಿಸಿದರು.
ನನ್ನೊಂದಿಗೆ ನನ್ನ ಗೆಳೆಯರಾದ ಶ್ರೀಜಿತ್, ರಂಜಿತ್ ಮತ್ತು ವಿಜಿತ್ ಸಹ ಪ್ರಯಾಣ ಹೊರಟಿದ್ದು, ನನ್ನ ಹೆತ್ತವರು ನನಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ನಾವು ನಮ್ಮ ಈ ಯಾನದಿಂದ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಹಂಬಲ ಹೊಂದಿದ್ದೇವೆ ಎಂದು ಅವರು ತಿಳಿಸಿದರು.





