ಕಾವ್ರಾಡಿ ಗ್ರಾಪಂ ಶೇ.100 ಲಸಿಕೆ ಸಾಧಿಸಿದ ಮೊದಲ ಗ್ರಾಪಂ: ಜಿಲ್ಲಾಧಿಕಾರಿ ಕೂರ್ಮಾ ರಾವ್
ಗ್ರಾಪಂಗೆ ಅಭಿನಂದನಾ ಪತ್ರ ರವಾನೆ

ಉಡುಪಿ, ಸೆ.3: ಜಿಲ್ಲೆಯ ಕುಂದಾಪುರ ತಾಲೂಕಿನ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಾವ್ರಾಡಿ ಗ್ರಾಮ ಪಂಚಾಯತ್ ತನ್ನ ಶೇ.100 ರಷ್ಟು ಜನರಿಗೆ ಒಂದು ಡೋಸ್ ಕೋವಿಡ್ -19 ಲಸಿಕೆ ಹಾಕಿ ಅಪರೂಪದ ಸಾಧನೆ ಮಾಡಿದ ಜಿಲ್ಲೆಯ ಮೊತ್ತಮೊದಲ ಗ್ರಾಪಂ ಆಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಪ್ರಕಟಿಸಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಅವರು, ರಾಜ್ಯದಲ್ಲೇ ಇಂಥ ಅಪರೂಪದ ಸಾಧನೆ ಮಾಡಿರುವುದಕ್ಕೆ ತಾನು ಸಂಬಂಧಪಟ್ಟ ಎಲ್ಲರನ್ನೂ ಅಭಿನಂದಿಸುವುದಾಗಿ ಅವರು ತಿಳಿಸಿದರು. ಇಲಾಖೆಗಳು ಸಮನ್ವಯದಿಂದ ಒಳ್ಳೆಯ ಕೆಲಸ ಮಾಡಿವೆ. ಇದಕ್ಕಾಗಿ ಗ್ರಾಪಂಗೆ ಅಭಿನಂದನಾ ಪತ್ರವನ್ನು ಕಳುಹಿಸುವುದಾಗಿ ಅವರು ತಿಳಿಸಿದರು. ಇದು ಉಳಿದ ಗ್ರಾಮಗಳಿಗೆ ಮಾದರಿಯಾಗಬೇಕಿದೆ ಎಂದರು.
ಜಿಲ್ಲೆಯಲ್ಲಿ ಕಾವ್ರಾಡಿ ಗ್ರಾಪಂ ತನ್ನ ವ್ಯಾಪ್ತಿಯಲ್ಲಿರುವ 18 ವರ್ಷ ಮೇಲಿನ ಶೇ.100ರಷ್ಟು ಅರ್ಹ ಜನರಿಗೆ ಲಸಿಕೆಯ ಮೊದಲ ಡೋಸ್‌ನ್ನು ನೀಡಿದೆ. ಅದೇ ರೀತಿ ಬ್ರಹ್ಮಾವರ ತಾಲೂಕಿನ ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನಡೂರು ಗ್ರಾಮದಲ್ಲೂ ಶೆ.100ರಷ್ಟು ಜನತೆ ಕೋವಿಡ್ ಲಸಿಕೆ ಪಡೆದು ಕೋವಿಡ್ ನಿಯಂತ್ರಣದಲ್ಲಿ ಮಾದರಿ ಗ್ರಾಮವಾಗಿ ಗುರುತಿಸಿ ಕೊಂಡಿದೆ.
ಕಾವ್ರಾಡಿ ಗ್ರಾಪಂ ಹಾಗೂ ನಡೂರು ಗ್ರಾಮದ 18 ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರೂ ಕೋವಿಡ್ ಪ್ರಥಮ ಡೋಸ್ ಲಸಿಕೆ ಪಡೆಯುವಲ್ಲಿ ಶೇ.100 ರಷ್ಟು ಯಶಸ್ವಿಯಾಗಿದ್ದು, ಅರ್ಧಕ್ಕೂ ಅಧಿಕ ಮಂದಿ ಎರಡನೇ ಡೋಸ್ ಲಸಿಕೆ ಯನ್ನೂ ಸಹ ಪಡೆದಿದ್ದಾರೆ.
ಕಾವ್ರಾಡಿ ಗ್ರಾಪಂ: ಈ ಗ್ರಾಪಂ ವ್ಯಾಪ್ತಿಯ ಕಾವ್ರಾಡಿ ಮತ್ತು ಹಳ್ನಾಡು ಗ್ರಾಮಗಳಲ್ಲಿ 4032 ಮಂದಿ 18 ವರ್ಷ ಮೇಲ್ಪಟ್ಟ ಗ್ರಾಮಸ್ಥರಿದ್ದು ಇವರೆಲ್ಲರೂ ಮೊದಲ ಹಂತದ ಕೋವಿಡ್ ಲಸಿಕೆ ಪಡೆದಿದ್ದಾರೆ. 45 ವರ್ಷ ಮೇಲ್ಪಟ್ಟವರಲ್ಲಿ ಈ ಮೊದಲೇ ಶೇ.100 ಸಾಧನೆ ಮಾಡಿದ್ದ ಇಲ್ಲಿ, 18 ವರ್ಷ ಮೇಲ್ಪಟ್ಟವವರು ತಾವೇ ಉತ್ಸಾಹದಿಂದ ಬಂದು ಲಸಿಕೆ ಪಡಿದಿದ್ದಾರೆ. ಲಸಿಕೆ ಪಡೆಯದೇ ದೂರ ಉಳಿದಿದ್ದವರನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಗುರುತಿಸಿ, ವೈದ್ಯರ ತಂಡದೊಂದಿಗೆ ಅವರ ಮನೆಗಳಿಗೆ ತೆರಳಿ ಕೋವಿಡ್ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ ಲಸಿಕೆ ನೀಡಿದ್ದಾರೆ.
ನಡೂರು ಗ್ರಾಮ: ಕಾಡೂರು ಗ್ರಾಪಂ ವ್ಯಾಪ್ತಿಯ ನಡೂರು ಗ್ರಾಮದಲ್ಲಿ 1888 ಮಂದಿ 18 ವರ್ಷ ಮೇಲ್ಪಟ್ಟ ಗ್ರಾಮಸ್ಥರಿದ್ದು, ಇವರೆಲ್ಲರೂ ಮೊದಲ ಹಂತದ ಕೋವಿಡ್ ಲಸಿಕೆಯನ್ನು ಈಗಾಗಲೇ ಪಡೆದಿದ್ದಾರೆ. ಈ ಗ್ರಾಮದಲ್ಲಿ ಪಂಚಾಯತ್‌ನ ಎಲ್ಲಾ ಸದಸ್ಯರು, ಪಂಚಾಯತ್ ಪಿಡಿಓ ಮತ್ತು ಸಿಬ್ಬಂದಿ ಹಾಗೂ ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ವರ್ಗ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಗ್ರಾಮಸ್ಥರಿಗೆ ಕೋವಿಡ್ ಕುರಿತು ಅರಿವು ಮೂಡಿಸುವುದರ ಜೊತೆಗೆ ಲಸಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರ ಪರಿಣಾಮ ಎಲ್ಲಾ ಗ್ರಾಮಸ್ಥರೂ ಯಾವುದೇ ಭಯವಿಲ್ಲದೆ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ.
ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಲತಾ ನಾಯಕ್ ಮತ್ತವರ ತಂಡ ಹಾಗೂ ಗ್ರಾಮದ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಹಾಗೂ ಪಿಡಿಓ, ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ವೈದ್ಯರಾದ ಡಾ. ಅನಿಲ್ ಮತ್ತವರ ತಂಡ ಹಾಗೂ ಗ್ರಾಮದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪಿಡಿಓ ಈ ಮಾದರಿ ಕಾರ್ಯದಲ್ಲಿ, ಪರಸ್ಪರ ಸಮನ್ವಯದಿಂದ ಯೋಜನೆ ರೂಪಿಸಿ ಕರ್ತವ್ಯ ನಿರ್ವಹಿಸಿದ್ದಾರೆ.
ಅಲ್ಲದೇ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, ಲಸಿಕೆ ಪಡೆದಿರುವ ಮತ್ತು ಪಡೆಯದಿರುವ ಅರ್ಹ ನಾಗರಿಕರ ಮಾಹಿತಿ ಸಂಗ್ರಹಿಸಿ ಲಸಿಕೆ ಕಾರ್ಯ ಸಂಪೂರ್ಣವಾಗಲು ಸಹಕರಿಸಿದ್ದಾರೆ. ಅಶಕ್ತರು ಮತ್ತು ಲಸಿಕಾ ಕೇಂದ್ರಗಳಿಗೆ ಬರಲು ಸಾಧ್ಯವಾಗದ ವೃದ್ದರಿಗೆ ಮನೆಗೆ ತೆರಳಿ ಲಸಿಕೆ ನೀಡಲಾಗಿದೆ. ನಿರಂತರವಾಗಿ ವ್ಯಾಕ್ಸಿನೇಶನ್ ಶಿಬಿರಗಳನ್ನು ಆಯೋಜಿಸುವ ಮೂಲಕ 18 ವರ್ಷ ಮೇಲ್ಪಟ್ಟ ಯಾವುದೇ ಗ್ರಾಮಸ್ಥರು ಲಸಿಕೆಯಿಂದ ವಂಚಿತರಾಗದಂತೆ ಕಾರ್ಯನಿರ್ವಹಿಸಲಾಗಿದೆ.
ಗ್ರಾಮ ಮಟ್ಟದ ಕೋವಿಡ್ ಟಾಸ್ಕ್ ಪೋರ್ಸ್ ತಂಡ ಕೂಡ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದ ಕಾರಣ ಜಿಲ್ಲೆಯಲ್ಲಿ ಈ ಹಿಂದೆ ಪಾಸಿಟಿವ್ ಪ್ರಮಾಣ ಹೆಚ್ಚಿರುವ ಗ್ರಾಮಗಳನ್ನು ಸೀಲ್‌ಡೌನ್ ಮಾಡುವ ಸಂದರ್ಭದಲ್ಲಿ ಸಹ ಈ ಗ್ರಾಮಗಳು ಸೀಲ್‌ಡೌನ್‌ಗೆ ಒಳಪಟ್ಟಿರಲಿಲ್ಲ. ಹೆಚ್ಚಿನ ಪಾಸಿಟಿವ್ ಪ್ರಕರಣಗಳು ಸಹ ಇಲ್ಲಿಂದ ವರದಿಯಾಗಿರಲಿಲ್ಲ.
ಉಡುಪಿ: ಶೇ.79 ಮಂದಿಗೆ ಮೊದಲ ಡೋಸ್ ಲಸಿಕೆ
ಉಡುಪಿ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಒಟ್ಟು 10,02,762 ಮಂದಿಯನ್ನು ಕೋವಿಡ್ ಲಸಿಕೆ ಪಡೆಯಲು ಅರ್ಹರು ಎಂದು ಗುರುತಿಸಲಾಗಿದೆ. ಇವವರಲ್ಲಿ ಈವರೆಗೆ ಒಟ್ಟು 7,88,294 ಮಂದಿಗೆ ಮೊದಲ ಡೋಸ್ ಲಸಿಕೆಯನ್ನು ಈಗಾಗಲೇ ನೀಡಲಾಗಿದೆ. ಇದು ಒಟ್ಟಾರೆ ಜನಸಂಖ್ಯೆಯ ಶೇ.79 ಆಗಿದ್ದು, ಇಡೀ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ.
ಇನ್ನು ಒಟ್ಟಾರೆಯಾಗಿ 2,95,011 ಮಂದಿಗೆ ಎರಡನೇ ಡೋಸ್ (ಅಂದರೆ ಎರಡೂ ಡೋಸ್) ನೀಡಲಾಗಿದೆ. ಈ ಮೂಲಕ ಶೇ.29ರಷ್ಟು ಮಂದಿಗೆ ಲಸಿಕೆಯನ್ನು ನೀಡಿದಂತಾಗಿದೆ. ಮೊದಲ ಡೋಸ್ ಪಡೆದು ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಇದ್ದ ಫಲಾನುಭವಿಗಳಲ್ಲಿ ಶೇ.92 ಮಂದಿಗೆ ಲಸಿಕೆ ನೀಡಿದ್ದು, ಈ ಮೂಲಕ ಉಡುಪಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.
18 ವರ್ಷ ಮೇಲ್ಪಟ್ಟವರಲ್ಲಿ ಮೊದಲ ಡೋಸ್ ಪಡೆಯಲು 2,14,468 ಮಂದಿ ಇದ್ದು, ಅವರನ್ನು ಸಂಘಸಂಸ್ಥೆಗಳ ಮೂಲಕ ಲಸಿಕೆ ಪಡೆಯುವಂತೆ ಮಾಹಿತಿ ನೀಡಲಾಗುತ್ತಿದೆ.
''ಕೋವಿಡ್ 3ನೇ ಅಲೆಯು ಮಕ್ಕಳಿಗೆ ಮಾತ್ರ ಭಾದಿಸಲಿದೆ ಎನ್ನುವುದು ತಪ್ಪು. ಇದು ಎಲ್ಲರಿಗೂ ಬಾಧಿಸಲಿದೆ ಎನ್ನುವ ತಜ್ಞರ ಅಭಿಪ್ರಾಯಗಳು ಕೇಳಿಬರುತ್ತಿದೆ. 3ನೇ ಅಲೆಯ ಅಪಾಯದಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರೂ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆಯಲೇಬೇಕು''
-ಡಾ. ಎಂ.ಜಿ.ರಾಮ, ಜಿಲ್ಲಾ ಕೋವಿಡ್ ಲಸಿಕಾ ನೋಡೆಲ್ ಅಧಿಕಾರಿ
''ಜಿಲ್ಲೆಯಲ್ಲಿ ಗ್ರಾಪಂಗಳ ವ್ಯಾಪ್ತಿಯಲ್ಲಿ ಈಗಾಗಲೇ ಶೇ.79ರಷ್ಟು ಮಂದಿಗೆ ಲಸಿಕೆ ನೀಡಲಾಗಿದ್ದು, ಎಲ್ಲಾ ಗ್ರಾಪಂಗಳು ತಮ್ಮ ವ್ಯಾಪ್ತಿಯ ಗ್ರಾಮಸ್ಥರು ಶೇ.100ರಷ್ಟು ಲಸಿಕೆ ಪಡೆದು ಕೋವಿಡ್ 3ನೇ ಅಲೆಗೆ ಸಿಲುಕದಂತೆ ಎಚ್ಚರ ವಹಿಸಬೇಕು. ಯಾವುದೇ ಗ್ರಾಮಸ್ಥರು ಲಸಿಕೆಯಿಂದ ದೂರ ಉಳಿಯದಂತೆ ಎಲ್ಲಾ ಗ್ರಾಮಗಳ ಕೋವಿಡ್ ಟಾಸ್ಕ್‌ಫೋರ್ಸ್‌ಗಳು ಯೋಜನೆ ರೂಪಿಸಿ ಕಾರ್ಯನಿರ್ವಹಿಸಬೇಕು.
-ಡಾ.ನವೀನ್ ಭಟ್ ವೈ, ಸಿಇಒ ಉಡುಪಿ ಜಿಪಂ







