ಕಾರವಾರ : ಸಮುದ್ರದಲ್ಲಿ ಬೋಟ್ ಮುಳುಗಡೆ; 6 ಮಂದಿ ಮೀನುಗಾರರ ರಕ್ಷಣೆ

ಕಾರವಾರ : ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರದಲ್ಲಿ ಮುಳುಗಡೆಯಾದ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾದ ಅಳಿವೆ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ.
ಹೊನ್ನಾವರದ ಬಂದರಿನಿಂದ ಶ್ರೀಕೃಷ್ಣ ಭಂಡಾರಿ ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಬಳಿಕ ಮೀನು ಹಿಡಿದುಕೊಂಡು ವಾಪಸ್ ಬರುವಾಗ ಜಲ ಮಾರ್ಗದ ಮಧ್ಯದ ಅಳಿವೆ ಪ್ರದೇಶದಲ್ಲಿ ಹೂಳು ತುಂಬಿದ್ದರಿಂದ ಇಂಜಿನ್‍ನಲ್ಲಿ ಸಮಸ್ಯೆ ಕಂಡು ಬಂದು ಮುಳುಗಡೆ ಆಗಿದೆ. ಇದರಿಂದಾಗಿ ಬೋಟ್‍ನಲ್ಲಿದ್ದ ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು.
ಬೋಟ್‍ನಲ್ಲಿದ್ದ 6 ಮಂದಿ ಮೀನುಗಾರರನ್ನು ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಶ್ರೀಕೃಷ್ಣ ಭಂಡಾರಿ ಹೆಸರಿನ ಶಿವರಾಮ ಶ್ರೀಯಾನ್ ಮಾಲಕತ್ವದ ಬೋಟ್ ಇದಾಗಿದ್ದು, ಬೋಟ್ ಮುಳುಗಡೆಯಿಂದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ನಷ್ಟವಾಗಿದೆ ಎಂದು ತಿಳಿದು ಬಂದಿದೆ.
Next Story





