ಫಿರೋಝಾಬಾದ್: 40 ಮಕ್ಕಳು ಸೇರಿದಂತೆ ಕನಿಷ್ಠ 50 ಜನರು ಡೆಂಗ್ಯೂಗೆ ಬಲಿ, ಕೇಂದ್ರದಿಂದ ತಜ್ಞರ ತಂಡ ರವಾನೆ

ಹೊಸದಿಲ್ಲಿ,ಸೆ.3: ಉತ್ತರ ಪ್ರದೇಶದ ಫಿರೋಝಾಬಾದ್ ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ 40 ಮಕ್ಕಳು ಸೇರಿದಂತೆ ಕನಿಷ್ಠ 50 ಜನರು ಡೆಂಗ್ಯೂ ರಕ್ತಸ್ರಾವ ಜ್ವರದಿಂದ ಮೃತಪಟ್ಟಿದ್ದಾರೆ.
ವಿಶ್ವಸಂಸ್ಥೆಯ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ಹೇಳುವಂತೆ ಇದು ಗಂಭೀರ ರೋಗವಾಗಿದ್ದು,ಕೆಲವೊಮ್ಮೆ ಮಾರಣಾಂತಿಕವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ತಿಳಿಸಿರುವಂತೆ ಜನರು ಡೆಂಗ್ಯೂ ರಕ್ತಸ್ರಾವ ಜ್ವರದಿಂದ ಮೃತಪಟ್ಟಿದ್ದಾರೆ. ಮಕ್ಕಳಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಹಠಾತ್ತನೆ ಕುಸಿಯುತ್ತದೆ ಮತ್ತು ವಿಪರೀತ ರಕ್ತಸ್ರಾವವುಂಟಾಗುತ್ತದೆ ಎಂದು ಫಿರೋಝಾಬಾದ್ ಜಿಲ್ಲಾಧಿಕಾರಿ ಚಂದ್ರವಿಜಯ ಸಿಂಗ್ ಹೇಳಿದರು.
ಕೇಂದ್ರ ಸರಕಾರವು ಅಧಿಕಾರಿಗಳಿಗೆ ನೆರವಾಗಲು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಮತ್ತು ರಾಷ್ಟ್ರೀಯ ವೈರಾಣು ರೋಗ ನಿಯಂತ್ರಣ ಯೋಜನೆಯ ತಜ್ಞರ ತಂಡವೊಂದನ್ನು ಫಿರೋಝಾಬಾದ್‌ಗೆ ರವಾನಿಸಿದೆ.
ಈ ವರೆಗೆ 50 ಜನರು ಮೃತಪಟ್ಟಿರುವುದನ್ನು ಮುಖ್ಯ ವೈದ್ಯಾಧಿಕಾರಿ ದಿನೇಶಕುಮಾರ ಪ್ರೇಮಿ ಅವರು ದೃಢಪಡಿಸಿದ್ದಾರೆ. ಆದರೆ 61 ಜನರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಶಾಸಕ ಮನೀಷ್ ಅಸಿಜಾ ಹೇಳಿದ್ದಾರೆ.
ಜಿಲ್ಲೆಯಲ್ಲಿ 36 ಸಕ್ರಿಯ ಶಿಬಿರಗಳಿದ್ದು,ಜ್ವರದಿಂದ ಬಳಲುತ್ತಿರುವವರು ಸೇರಿದಂತೆ 3,719 ಜನರಿಗೆ ಈ ಶಿಬಿರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಈ ನಡುವೆ ಜಿಲ್ಲಾಧಿಕಾರಿಗಳು ಮುಖ್ಯ ಅಭಿವೃದ್ಧಿ ಅಧಿಕಾರಿಯನ್ನು ರೊಗಿಗಳಿಗೆ ಚಿಕಿತ್ಸೆ ಮತ್ತು ಇತರ ಸೌಲಭ್ಯಗಳ ಮೇಲ್ವಿಚಾರಣೆಗಾಗಿ ಜಿಲ್ಲಾ ನೋಡಲ್ ಅಧಿಕಾರಿಯನ್ನಾಗಿ ನೇಮಕಗೊಳಿಸಿದ್ದಾರೆ.
ರಾಜ್ಯ ಸರಕಾರವು ಬುಧವಾರ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ನೀತಾ ಕುಲಶ್ರೇಷ್ಠ ಅವರನ್ನು ವರ್ಗಾವಣೆಗೊಳಿಸಿದ ಬೆನ್ನಿಗೇ ಗುರುವಾರ ಜಿಲ್ಲಾಧಿಕಾರಿಗಳು ನಿರ್ಲಕ್ಷ್ಯದ ಆರೋಪದಲ್ಲಿ ಮೂವರು ವೈದ್ಯರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಮಥುರಾ,ಇಟಾ,ಹಾಪುರ್ ಮತ್ತು ಮೈನಪುರಿಗಳಲ್ಲಿಯೂ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದು ವರದಿಯಾಗಿದೆ.
ಆದಿತ್ಯನಾಥ ಸರಕಾರವನ್ನು ಟೀಕಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು,ಕೋವಿಡ್ ಎರಡನೇ ಅಲೆಯ ಸಂದರ್ಭ ತನ್ನ ವಿಫಲ ನಿರ್ವಹಣೆಯಿಂದಾಗಿ ಉಂಟಾಗಿದ್ದ ಭೀಕರ ಪರಿಣಾಮಗಳಿಂದ ರಾಜ್ಯ ಸರಕಾರವು ಪಾಠಗಳನ್ನು ಕಲಿತುಕೊಂಡಿಲ್ಲವೇ ಎಂದು ಪ್ರಶ್ನಿಸಿ ಟ್ವೀಟಿಸಿದ್ದಾರೆ.







