ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿ: ಶಿಕ್ಷಣತಜ್ಞ ಪ್ರೊ.ನಿರಂಜನಾರಾಧ್ಯ

ಪ್ರೊ.ನಿರಂಜನಾರಾಧ್ಯ
ಬೆಂಗಳೂರು, ಸೆ.3: ಗ್ರಾಮೀಣ ಭಾಗದ ಮಕ್ಕಳು ಶಾಲಾ-ಕಾಲೇಜಿಗೆ ಹೋಗಲು ಸಮಸ್ಯೆಯಾಗದ ರೀತಿಯಲ್ಲಿ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಶಿಕ್ಷಣತಜ್ಞ ಪ್ರೊ.ನಿರಂಜನಾರಾಧ್ಯ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರಕಾರ ಹಂತ, ಹಂತವಾಗಿ ಶಾಲೆಗಳನ್ನು ಪ್ರಾರಂಭಿಸುತ್ತಿರುವುದು ಒಳ್ಳೆಯ ವಿಚಾರ. ಆದರೆ, ಅದೇ ಹೊತ್ತಿನಲ್ಲಿ ಮಕ್ಕಳ ಸಂಚಾರಕ್ಕೆ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಾಲೆಗೆ ಬರುವಲ್ಲಿ ಸರಕಾರಿ ಬಸ್ಗಳ ಪಾತ್ರ ತುಂಬಾ ಹೆಚ್ಚಾಗಿವೆ. ಮಕ್ಕಳು ಕೋವಿಡ್ ನಿಯಮವನ್ನು ಕಾಪಾಡಿಕೊಂಡು ಶಾಲೆಗೆ ಬರಲು ಅನುಕೂಲ ಆಗುವಂತೆ ಪಟ್ಟಣ, ನಗರದಲ್ಲಿ, ಶಾಲಾ ಸಮಯಕ್ಕೆ ಹೆಚ್ಚಿನ ಬಸ್ಗಳ ವ್ಯವಸ್ಥೆಯನ್ನು ಮಾಡಿ ಮಕ್ಕಳು ಆತಂಕವಿಲ್ಲದೆ ಶಾಲೆಗೆ ತೆರಳಲು ವ್ಯವಸ್ಥೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಶಾಲೆ ತೆರೆಯುವ ಮೊದಲು ಅಗತ್ಯ ಮೂಲಭೂತ ಸೌಕರ್ಯ, ಮಕ್ಕಳಿಗೆ ಪುಸ್ತಕ, ಶಾಲೆಗಳಲ್ಲಿ ಶಿಕ್ಷಕರನ್ನು ನೇಮಿಸುವ ಬಗ್ಗೆ ಈಗಾಗಲೇ ಸರಕಾರದ ಗಮನಕ್ಕೆ ತರಲಾಗಿದೆ. ಶಾಲಾ ಹಂತದಲ್ಲಿ ಸಿದ್ಧತೆಗಾಗಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ ಹಣ ಬಿಡುಗಡೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.





