ಆರಂಭವಾಗಿದ್ದಲ್ಲೆ ನಿಂತ ಎತ್ತಿನಹೊಳೆ ಯೋಜನೆ: ಕೃಷ್ಣ ಭೈರೇಗೌಡ ಟೀಕೆ

ಬೆಂಗಳೂರು, ಸೆ. 3: `ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಬರಪೀಡಿತ ಜಿಲ್ಲೆಗಳಲ್ಲಿನ ಕೆರೆ ತುಂಬಿಸುವ ಎತ್ತಿನಹೊಳೆ ಯೋಜನೆ ಎಲ್ಲಿ ಆರಂಭವಾಗಿತ್ತೋ ಅಲ್ಲಿಯೇ ನಿಂತಿದೆ. ಭ್ರಷ್ಟ ಬಿಜೆಪಿ ಸರಕಾರ ಕಮಿಷನ್ ಸರಕಾರವಾಗಿದೆ' ಎಂದು ಮಾಜಿ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಹಾಲಿ ಶಾಸಕ ಕೃಷ್ಣ ಭೈರೇಗೌಡ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, `ಕಾಂಗ್ರೆಸ್ ಸರಕಾರದಲ್ಲಿ ಎತ್ತಿನಹೊಳೆ ಯೋಜನೆಯ ಬೃಹತ್ ಕಾಮಗಾರಿಗೆ ದಿಟ್ಟ ನಿರ್ಧಾರ ಕೈಗೊಂಡು ಹಸಿರು ನಿಶಾನೆ ತೋರಿದ್ದ ಹೆಗ್ಗಳಿಕೆ ಇದೆ. ಆದರೆ, 2018ರಲ್ಲಿ ಕಾಮಗಾರಿಗಳ ಉದ್ಘಾಟನೆ ಆಗಿ ಕೆಲಸ ಎಲ್ಲಿಗೆ ಬಂದು ನಿಂತಿದೆಯೋ ಅಲ್ಲಿಯೇ ನಿಂತುಹೋಗಿದೆ' ಎಂದು ಟೀಕಿಸಿದರು.
`ಜನಗಳಿಗೆ ಬಣ್ಣ ಬಣ್ಣದ ಮಾತುಗಳಾಡಿ ಮತ ಬ್ಯಾಂಕ್‍ಗಳನ್ನಾಗಿ ಮಾಡಿಕೊಂಡಿದ್ದಾರೆ. ಈ ಬಾರಿ ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ, ಆದಷ್ಟು ಶೀಘ್ರವಾಗಿ ಎತ್ತಿನಹೊಳೆ ನೀರು ಈ ಭಾಗದ ಜನರಿಗೆ ಸಿಗುವ ಕೆಲಸವನ್ನು ಮಾಡಲಾಗುತ್ತದೆ.
ಆ ಮೂಲಕ ಬರಪೀಡಿತ ಜಿಲ್ಲೆಗಳಲ್ಲಿ ಕೆರೆ ತುಂಬಿಸುವ ಮೂಲಕ ಆ ಪ್ರದೇಶಗಳಲ್ಲಿನ ಅಂತರ್ಜಲ ವೃದ್ಧಿಗೆ ಕ್ರಮ ವಹಿಸಲಾಗುವುದು ಎಂದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, `ಕೋವಿಡ್ ಮೊದಲನೆ ಅಲೆ ಚೀನಾದಿಂದ ಬಂದಿದ್ದರೂ, ಎರಡು ಮತ್ತು ಮೂರನೇ ಅಲೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ಲಕ್ಷ್ಯದಿಂದ ಬಂದಿದೆ. ಅವೈಜ್ಞಾನಿಕ ಲಾಕ್‍ಡೌನ್‍ನಿಂದ ರೈತರು, ಕಾರ್ಮಿಕರು ಸೇರಿದಂತೆ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಕೊರೊನ ಸಾವಿನ ಸಂಖ್ಯೆ ಬಗ್ಗೆ ಸುಳ್ಳು ಅಂಕಿ-ಅಂಶಗಳನ್ನು ಕೊಟ್ಟಿದ್ದಾರೆ. ಲಸಿಕೆಯನ್ನು ಸರಿಯಾಗಿ ಕೊಟ್ಟಿಲ್ಲ. ಸೋಂಕಿನಿಂದ ಸಾವಿಗೀಡಾದವರ ಕುಟುಂಬಕ್ಕೆ ಇನ್ನೂ ಪರಿಹಾರ ಕೊಟ್ಟಿಲ್ಲ. ಅಭಿವೃದ್ಧಿಯ ಮಾತು ದೂರವೇ ಉಳಿದಿದ್ದು, ಅಧಿಕಾರಕ್ಕಾಗಿ ಕಚ್ಚಾಟ ನಡೆಸಿದ್ದಾರೆ' ಎಂದು ಟೀಕಿಸಿದರು.







