ಶಿವಮೊಗ್ಗ: ಲಂಚ ಪ್ರಕರಣ; ಅರಣ್ಯ ಇಲಾಖೆ ಅಧಿಕಾರಿ ಎಸಿಬಿ ಬಲೆಗೆ

ಶಿವಮೊಗ್ಗ ,ಸೆ.03: ಲಂಚ ಪಡೆಯುತ್ತಿದ್ದಾಗಲೆ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ. ಶಿರಾಳಕೊಪ್ಪ ವಲಯ ಅರಣ್ಯ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಇವತ್ತು ದಾಳಿ ನಡೆಸಿದ್ದಾರೆ.
ಡಿಆರ್‌ಎಫ್‌ಒ ವೀರೇಶ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಪ್ರಕರಣವೊಂದರ ಆರೋಪಿಯಿಂದ ಏಳು ಸಾವಿರ ರೂ. ಹಣ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಏನಿದು ಪ್ರಕರಣ? ಲಂಚಕ್ಕೆ ಬೇಡಿಕೆ ಇಟ್ಟಿದ್ದೇಕೆ?
ಸೊರಬ ತಾಲೂಕು ಇಂಡುವಳ್ಳಿ ಗ್ರಾಮದ ವ್ಯಕ್ತಿಯೊಬ್ಬರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿತ್ತು. ಇದರ ಚಾರ್ಜ್‌ಶೀಟ್ ಸಲ್ಲಿಸುವಾಗ ಏನೂ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಆ ವ್ಯಕ್ತಿಗೆ ಡಿಆರ್‌ಎಫ್‌ಒ ವೀರೇಶ್ ಭರವಸೆ ನೀಡಿದ್ದರು. ಅದಕ್ಕಾಗಿ ಹತ್ತು ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಇವತ್ತು ಏಳು ಸಾವಿರ ರೂ. ಪಡೆಯುತ್ತಿದ್ದಾಗ ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿ ಡಿಆರ್‌ಎಫ್ಒ ವೀರೇಶ್‌ನನ್ನು ಬಂಧಿಸಲಾಗಿದೆ. ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.





