ಕಾಬೂಲ್ ನಲ್ಲಿನ ಭಾರತೀಯ ರಾಯಭಾರಿ ಕಚೇರಿ ಸುರಕ್ಷಿತ, ಸ್ಥಳೀಯ ಸಿಬಂದಿಗಳಿಗೆ ವೇತನ ಪಾವತಿ

ಕಾಬೂಲ್ [file photo : PTI]
ಹೊಸದಿಲ್ಲಿ : ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಈಗ ಸುರಕ್ಷಿತವಾಗಿದ್ದು ಕಾರ್ಯನಿರ್ವಹಿಸುತ್ತಿದೆ ಮತ್ತು ಕಚೇರಿಯ ಸ್ಥಳೀಯ ಸಿಬಂದಿಗಳಿಗೆ ಸರಕಾರ ವೇತನ ಪಾವತಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಿರ್ವಹಣಾ ವೆಚ್ಚ ಮತ್ತು ಸ್ಥಳೀಯ ಸಿಬಂದಿಗಳ ವೇತವನ್ನು ಸಕಾಲದಲ್ಲಿ ಭಾರತ ಸರಕಾರ ಪಾವತಿಸಿದೆ. ಅಲ್ಲದೆ ಕಾಬೂಲ್ನ ರಾಯಭಾರಿ ಕಚೇರಿಯಿಂದ ಭಾರತದ ವಿದೇಶ ವ್ಯವಹಾರ ಸಚಿವಾಲಯ ನಿರಂತರವಾಗಿ ಮಾಹಿತಿ, ಸಂವಹನ ಸ್ವೀಕರಿಸುತ್ತಿದೆ ಎಂದು ಉನ್ನತ ಅಧಿಕಾರಿ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ಕಾಬೂಲ್ನಲ್ಲಿರುವ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಬ್ಯಾಂಕ್ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಸಿಬಂದಿಗಳು ವೇತನವನ್ನು ಖಾತೆಯಿಂದ ಹಿಂತೆಗೆಯಲು ಸಮಸ್ಯೆಯಾಗಿರಬಹುದು. ಅಫ್ಘಾನ್ನಲ್ಲಿ ಇನ್ನೂ ಕೆಲವು ಭಾರತೀಯರಿದ್ದು ಅವರನ್ನು ದೇಶಕ್ಕೆ ಸ್ಥಳಾಂತರಿಸುವ ಪ್ರಯತ್ನ ಮುಂದುವರಿದಿದೆ. ಆದರೆ ಕಾಬೂಲ್ ವಿಮಾನ ನಿಲ್ದಾಣ ಮುಚ್ಚಿರುವುದರಿಂದ ಮತ್ತು ವಿಮಾನಗಳ ಸಂಚಾರವನ್ನು ತಾಲಿಬಾನ್ ನಿಷೇಧಿಸಿರುವುದರಿಂದ ವಿಳಂಬವಾಗುತ್ತಿದೆ. ಅಲ್ಲಿರುವ ಭಾರತೀಯರ ತ್ವರಿತ ಸ್ಥಳಾಂತರದ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಾಬೂಲ್ನೊಂದಿಗೆ ಮತ್ತು ಅಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿದೆ ಎಂದು ವಿದೇಶ ವ್ಯವಹಾರ ಸಚಿವಾಲಯ ಹೇಳಿದೆ.
ಆದರೆ ಭಾರತದ ರಾಜತಾಂತ್ರಿಕರು ಮತ್ತು ರಾಯಭಾರಿ ಕಚೇರಿ ಸಿಬಂದಿಗಳು ಕಾಬೂಲ್ಗೆ ಹಿಂತಿರುಗುವ ವಿಷಯ ನೂತನ ತಾಲಿಬಾನ್ ಸರಕಾರದ ಉಪಕ್ರಮಗಳನ್ನು ಆಧರಿಸಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.







