ನಿರಾಶ್ರಿತರ ಮಹಾಪೂರದ ಭೀತಿ: ಅಫ್ಘಾನ್‌ನೊಂದಿಗಿನ ಪ್ರಮುಖ ಗಡಿದಾಟು ಮುಚ್ಚಿದ ಪಾಕ್
ಇಸ್ಲಮಾಬಾದ್, ಸೆ.3: ಅಫ್ಘಾನ್ ನಿರಾಶ್ರಿತರ ಮಹಾಪೂರದ ಭೀತಿಯ ಹಿನ್ನೆಲೆಯಲ್ಲಿ ಅಫ್ಘಾನ್‌ನೊಂದಿಗಿನ ಪ್ರಮುಖ ಗಡಿದಾಟು ಪ್ರದೇಶ, ಚಮನ್ ಗಡಿಭಾಗವನ್ನು ಭದ್ರತಾ ಕಾರಣಕ್ಕಾಗಿ ಪಾಕಿಸ್ತಾನ ತಾತ್ಕಾಲಿಕವಾಗಿ ಮುಚ್ಚಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಜಿಯೊ ನ್ಯೂಸ್ ವರದಿ ಮಾಡಿದೆ.
ಅಫ್ಘಾನ್‌ನ ಮೇಲೆ ತಾಲಿಬಾನಿಗಳು ನಿಯಂತ್ರಣ ಸಾಧಿಸಿದ ಬಳಿಕ ಅಲ್ಲಿಂದ ಪಲಾಯನ ಮಾಡುತ್ತಿರುವ ಸ್ಥಳೀಯರು ಚಮನ್ ಗಡಿದಾಟು ದಾಟಿ ಪಾಕಿಸ್ತಾನ ಪ್ರವೇಶಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅಫ್ಘಾನ್ ಗಡಿಭಾಗದಲ್ಲಿರುವ ಎರಡನೇ ಬೃಹತ್ ವಾಣಿಜ್ಯ ಕೇಂದ್ರವಾಗಿರುವ ಚಮನ್ ಭಾಗದಲ್ಲಿ ಭದ್ರತೆಗೆ ಎದುರಾಗಿರುವ ಭೀತಿಯ ಹಿನ್ನೆಲೆಯಲ್ಲಿ ಈ ಗಡಿ ದಾಟು ಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಲಾಗಿದೆ. ಗಡಿಭಾಗದಲ್ಲಿನ ನಮ್ಮ ಪಡೆಗಳು ದೇಶದ ಭದ್ರತೆಗಾಗಿ ಶ್ಲಾಘನೀಯ ಕೆಲಸ ಮಾಡುತ್ತಿವೆ ಎಂದು ಪಾಕಿಸ್ತಾನದ ಒಳಾಡಳಿತ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ. ಪಾಕಿಸ್ತಾನದಲ್ಲಿ 3 ಲಕ್ಷಕ್ಕೂ ಅಧಿಕ ಅಫ್ಘಾನ್ ನಿರಾಶ್ರಿತರಿದ್ದಾರೆ. ಇನ್ನಷ್ಟು ನಿರಾಶ್ರಿತರಿಗೆ ಆಶ್ರಯ ನೀಡುವ ಸ್ಥಿತಿಯಲ್ಲಿ ನಾವಿಲ್ಲ. ಆದ್ದರಿಂದ ಬುಧವಾರ ಅಫ್ಘಾನ್‌ನ ಸ್ಪಿನ್ ಬೊಲ್ಡಾಕ್ ಜಿಲ್ಲೆಯ ಗಡಿಭಾಗದ ಮೂಲಕ ಪಾಕ್ ಪ್ರವೇಶಿಸಲು ಮುಂದಾಗಿದ್ದ ಕನಿಷ್ಟ 5 ಸಾವಿರ ಅಫ್ಘನ್ನರನ್ನು ತಡೆಹಿಡಿಯಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಾಕಿಸ್ತಾನ-ಅಫ್ಘಾನಿಸ್ತಾನ ನಡುವಿನ 2,670 ಕಿ.ಮೀ ಗಡಿಭಾಗದಲ್ಲಿ ಸುಮಾರು 10ಕ್ಕೂ ಅಧಿಕ ಗಡಿದಾಟುಗಳಿದ್ದು , ಪ್ರಯಾಣ ದಾಖಲೆ ಹೊಂದಿರುವವರಿಗೆ ಮಾತ್ರ ಪಾಕಿಸ್ತಾನ ಪ್ರವೇಶಿಸಲು ಅನುಮತಿಸಲಾಗಿದೆ. ಪಾಕ್-ಅಫ್ಘಾನ್ ನಡುವಿನ ಗಡಿಭಾಗದ ಶೇ. 90 ಪ್ರದೇಶದಲ್ಲಿ ಮುಳ್ಳುತಂತಿಯ ಬೇಲಿ ಅಳವಡಿಸಲಾಗಿದೆ.
ಈ ಮಧ್ಯೆ, ಪಾಕಿಸ್ತಾನದ ಗಡಿದಾಟಲು ಬೃಹತ್ ಸಂಖ್ಯೆಯಲ್ಲಿ ಜನತೆ ಗುಂಪುಗೂಡಿದ್ದು ಈ ಸಂದರ್ಭ ನಡೆದ ಕಾಲ್ತುಳಿತದಲ್ಲಿ 4 ಮಂದಿ ಮೃತರಾಗಿರುವುದಾಗಿ ವರದಿಯಾಗಿದೆ. ಗಡಿದಾಟಲು ಜನ ನೂಕುನುಗ್ಗಲು ನಡೆಸುತ್ತಿರುವ ವೀಡಿಯೊ ವೈರಲ್ ಆಗಿದೆ.







