ಪದತ್ಯಾಗದ ಸುಳಿವು ನೀಡಿದ ಜಪಾನ್ ಪ್ರಧಾನಿ
ಟೋಕ್ಯೋ, ಸೆ.3: ಆಡಳಿತಾರೂಢ ಲಿಬರಲ್ ಡೆಮೊಕ್ರಾಟಿಕ್ ಪಾರ್ಟಿಯ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ ಎಂದು ಜಪಾನ್ ಪ್ರಧಾನಿ ಯೊಶಿಹಿಡೆ ಸುಗಾ ಶುಕ್ರವಾರ ಹೇಳಿದ್ದು , ಈ ಮೂಲಕ ಅವರು ಪದತ್ಯಾಗದ ಸುಳಿವು ನೀಡಿರುವುದಾಗಿ ‘ದಿ ಗಾರ್ಡಿಯನ್’ ವರದಿ ಮಾಡಿದೆ.
ಸುಮಾರು 1 ವರ್ಷದ ಹಿಂದಷ್ಟೇ ಜಪಾನ್ ಪ್ರಧಾನಿಯಾಗಿ ಅಧಿಕಾರ ವಹಿಸಿದ್ದ ಸುಗಾ ಕೊರೋನ ಸೋಂಕಿನ ವಿರುದ್ಧ ಸೂಕ್ತ ರೀತಿಯಲ್ಲಿ ಕ್ರಮಗಳನ್ನು ಕೈಗೊಂಡಿಲ್ಲ ಎಂದು ತೀವ್ರ ಟೀಕೆಯನ್ನು ಎದುರಿಸುತ್ತಿದ್ದಾರೆ. ಕೊರೋನ ಸೋಂಕಿನ ವಿರುದ್ಧ ಶಕ್ತಿ ಮೀರಿ ಹೋರಾಡಿದ್ದೇನೆ. ಇದೀಗ ಪಕ್ಷದ ನಾಯಕತ್ವಕ್ಕೆ ಸೆ.29ರಂದು ನಡೆಯಲಿರುವ ಚುನಾವಣೆಯಲ್ಲಿ ಹೋರಾಟ ಮುಂದುವರಿಸಲು ನನಗೆ ಸಾಧ್ಯವಾಗದು ಎಂದು ಭಾವಿಸಿದ್ದೇನೆ ಎಂದು ಸುಗಾ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಪ್ರಧಾನಿ ಸುಗಾ ಕೊರೋನ ಸೋಂಕು ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದರು. ಇದೀಗ ಅವರು ತೆಗೆದುಕೊಂಡಿರುವ ನಿರ್ಧಾರ ವಿಷಾದನೀಯವಾಗಿದೆ. ಸಾಕಷ್ಟು ಯೋಚಿಸಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ತೊಶಿಹಿರೊ ನಿಕಾಯಿ ಹೇಳಿದ್ದಾರೆ.
ಜಪಾನ್‌ನಲ್ಲಿ ಡೆಲ್ಟಾ ರೂಪಾಂತರ ಸೋಂಕು ತೀವ್ರಗತಿಯಲ್ಲಿ ಉಲ್ಬಣಿಸಿದ್ದು, ದೇಶದ ಬಹುತೇಕ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ. ಆಗಸ್ಟ್ 20ರಂದು ಒಂದೇ ದಿನ 25,892 ಹೊಸ ಸೋಂಕು ಪ್ರಕರಣ ದಾಖಲಾಗಿದ್ದು ದೇಶದಲ್ಲಿ ಇದುವರೆಗೆ ಒಟ್ಟು 15,11,522 ಹೊಸ ಸೋಂಕು ಪ್ರಕರಣ ಮತ್ತು 16,151 ಸಾವಿನ ಪ್ರಕರಣ ವರದಿಯಾಗಿದೆ.







