ಬಲೂಚಿಸ್ತಾನದ ಪ್ರಥಮ ಚುನಾಯಿತ ಮುಖ್ಯಮಂತ್ರಿ ಅತಾವುಲ್ಲಾ ಮೆಂಗಲ್ ನಿಧನ
ಹೊಸದಿಲ್ಲಿ, ಸೆ.3: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಮೊತ್ತಮೊದಲ ಚುನಾಯಿತ ಮುಖ್ಯಮಂತ್ರಿ ಸರ್ದಾರ್ ಅತಾವುಲ್ಲಾ ಮೆಂಗಲ್ ತೀವ್ರ ಅನಾರೋಗ್ಯದಿಂದಾಗಿ ಕರಾಚಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೆಂಗಲ್ ನಿಧನಕ್ಕೆ ಪಾಕ್ ಸಂಸದ ತಾಹಿರ್ ಬಿಝೆಂಜೊ ಮತ್ತು ಸಂಸತ್ತಿನಲ್ಲಿ ವಿಪಕ್ಷ ಮುಖಂಡರಾಗಿರುವ ಶೆಹ್ಬಾಝ್ ಶರೀಫ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಮೆಂಗಲ್ ಬಲೂಚಿಸ್ತಾನದ ವಿರುದ್ಧದ ಎಲ್ಲಾ ಅನ್ಯಾಯಗಳನ್ನೂ ದೃಢವಾಗಿ ವಿರೋಧಿಸಿದ ಮುಖಂಡ ಎಂದು ತಾಹಿರ್ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.
ಮೆಂಗಲ್ 1972ರ ಮೇ 1ರಂದು ಬಲೂಚಿಸ್ತಾನದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಆದರೆ 8 ತಿಂಗಳೊಳಗೆ ಅವರ ಸರಕಾರವನ್ನು ಪಾಕ್‌ನ ಆಗಿನ ಪ್ರಧಾನಿ ಭುಟ್ಟೋ ವಿಸರ್ಜಿಸಿದ್ದರು. 1973ರಲ್ಲಿ ಇಸ್ಲಾಮಾಬಾದ್‌ನಲ್ಲಿರುವ ಇರಾಕಿ ದೂತಾವಾಸದಲ್ಲಿ ಶಸ್ತ್ರಾಸ್ತ್ರಗಳಿದ್ದ ಸರಕು ಪತ್ತೆಯಾಗಿತ್ತು. ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳಿಗೆ ಇದನ್ನು ರವಾನಿಸುವ ಉದ್ದೇಶದಿಂದ ಸಂಗ್ರಹಿಸಲಾಗಿದೆ ಎಂದು ಭುಟ್ಟೊ ಭಾವಿಸಿದ್ದರು. ಆ ಬಳಿಕ ಮೆಂಗಲ್ ಸರಕಾರವನ್ನು ವಿಸರ್ಜಿಸಿ ಹಲವರನ್ನು ಬಂಧಿಸಲಾಗಿತ್ತು.
1975ರಲ್ಲಿ ಪ್ರತ್ಯೇಕತಾವಾದಿ ಕೃತ್ಯಗಳಲ್ಲಿ ತೊಡಗಿರುವ ಆರೋಪದಲ್ಲಿ ಮೆಂಗಲ್ ಹಾಗೂ ಬಲೋಚ್ ಚಳವಳಿಯ ಇತರ 3 ಪ್ರಮುಖ ಮುಖಂಡರನ್ನು ಭುಟ್ಟೋ ಸರಕಾರ ಬಂಧಿಸಿತ್ತು. 1977ರಲ್ಲಿ ಭುಟ್ಟೋ ಸರಕಾರವನ್ನು ಸೇನಾ ಮುಖಂಡ ಝಿಯಾ ಉಲ್ ಹಕ್ ಪದಚ್ಯುತಗೊಳಿಸಿದ ಬಳಿಕ ಬಲೂಚಿಸ್ತಾನದ ಹಲವು ಮುಖಂಡರನ್ನು ಬಿಡುಗಡೆಗೊಳಿಸಲಾಗಿತ್ತು. ಬಳಿಕ ಬ್ರಿಟನ್‌ನಲ್ಲಿ ದೇಶಭ್ರಷ್ಟ ಜೀವನ ನಡೆಸಿದ್ದ ಮೆಂಗಲ್ 1990ರಲ್ಲಿ ಬಿಎನ್‌ಪಿ-ಎಂ ಪಕ್ಷ ಸ್ಥಾಪಿಸುವ ಮೂಲಕ ಪಾಕಿಸ್ತಾನಕ್ಕೆ ಮರಳಿದ್ದರು. 1977ರ ಚುನಾವಣೆಯಲ್ಲಿ ಬಿಎನ್‌ಪಿ-ಎಂ ಪಕ್ಷ ಭರ್ಜರಿ ಗೆಲುವು ಪಡೆದರೂ ಬಳಿಕ ಭಿನ್ನಾಭಿಪ್ರಾಯದಿಂದ ಸರಕಾರವನ್ನು ವಿಸರ್ಜಿಸಲಾಗಿತ್ತು. 2002 ಮತ್ತು 2008ರ ಚುನಾವಣೆಯನು ಬಿಎನ್‌ಪಿ-ಎಂ ಪಕ್ಷ ಬಹಿಷ್ಕರಿಸಿತ್ತು.







