ಟೋಕಿಯೊ ಪ್ಯಾರಾಲಿಂಪಿಕ್ಸ್: ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಫೈನಲ್ ಗೆ, ಬೆಳ್ಳಿ ಖಚಿತ

photo: Twitter
ಟೋಕಿಯೊ: ಹಾಲಿ ವಿಶ್ವ ಚಾಂಪಿಯನ್ ಪ್ರಮೋದ್ ಭಗತ್ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಶನಿವಾರ ಜಪಾನಿನ ಡೈಸುಕ್ ಫುಜ್ಹರಾ ಅವರನ್ನು ನೇರ ಗೇಮ್ ಗಳ ಅಂತರದಿಂದ ಸೋಲಿಸಿ ಬ್ಯಾಡ್ಮಿಂಟನ್ ಸ್ಪರ್ಧೆಯ ಪುರುಷರ ಸಿಂಗಲ್ಸ್ ನಲ್ಲಿ ಫೈನಲ್ ಗೆ ಪ್ರವೇಶಿಸಿದ್ದಾರೆ.
33ರ ಹರೆಯದ ಪ್ರಮೋದ್ ವಿಶ್ವದ ನಂ.1 ಆಟಗಾರನಾಗಿದ್ದು, ಹಾಲಿ ಏಶ್ಯನ್ ಚಾಂಪಿಯನ್ ಆಗಿದ್ದಾರೆ. ಶನಿವಾರ 36 ನಿಮಿಷಗಳಲ್ಲಿ ಅಂತ್ಯಗೊಂಡ ಪುರುಷರ ಸಿಂಗಲ್ಸ್ ಎಸ್ ಎಲ್ 3 ಕ್ಲಾಸ್ ಸೆಮಿ ಫೈನಲ್ ನಲ್ಲಿ ಜಪಾನ್ ಆಟಗಾರನನ್ನು 21-11, 21-16 ಗೇಮ್ ಗಳ ಅಂತರದಿಂದ ಸೋಲಿಸಿದರು.
ಈ ವರ್ಷದ ಪ್ಯಾರಾಲಿಂಪಿಕ್ಸ್ ನಲ್ಲಿ ಮೊದಲ ಬಾರಿ ಬ್ಯಾಡ್ಮಿಂಟನ್ ಸೇರ್ಪಡೆ ಮಾಡಿರುವ ಕಾರಣ ಪ್ರಮೋದ್ ಅವರು ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಚಿನ್ನದ ಪದಕ ಸುತ್ತಿಗೆ ಅರ್ಹತೆ ಪಡೆದಿರುವ ಭಾರತದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಫೈನಲ್ ತಲುಪುವ ಮೂಲಕ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ.
ಪ್ರಮೋದ್ 5ನೇ ವಯಸ್ಸಿನಲ್ಲಿ ಪೋಲಿಯೊ ರೋಗಕ್ಕೆ ತುತ್ತಾಗಿ ಎಡಗಾಲಿನಲ್ಲಿ ದೋಷ ಕಾಣಿಸಿಕೊಂಡಿತ್ತು. ಆದಾಗ್ಯೂ ಅವರು ವಿಶ್ವ ಚಾಂಪಿಯನ್ ಶಿಪ್ ನಲ್ಲಿ 4 ಚಿನ್ನ ಸಹಿತ ಈ ತನಕ ಒಟ್ಟು 45 ಅಂತರ್ ರಾಷ್ಟ್ರೀಯ ಪದಕಗಳನ್ನು ಗೆದ್ದುಕೊಂಡಿದ್ದಾರೆ.