ಮಮತಾ ಬ್ಯಾನರ್ಜಿ ಸ್ಪರ್ಧಿಸಲಿರುವ ಬಂಗಾಳ ವಿಧಾನಸಭಾ ಕ್ಷೇತ್ರದಲ್ಲಿ ಸೆಪ್ಟೆಂಬರ್ 30 ರಂದು ಉಪ ಚುನಾವಣೆ

ಹೊಸದಿಲ್ಲಿ: ಬಂಗಾಳದ ಭಬನಿಪುರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಸೆಪ್ಟೆಂಬರ್ 30 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಶನಿವಾರ ಮಧ್ಯಾಹ್ನ ಹೇಳಿದೆ.
ಮುಖ್ಯಮಂತ್ರಿಯಾಗಿ ಉಳಿಯಲು ಮಮತಾ ಬ್ಯಾನರ್ಜಿ ಭಬನಿಪುರ ವಿಧಾನಸಭಾ ಕ್ಷೇತ್ರವನ್ನು ಗೆಲ್ಲಲೇಬೇಕಾಗಿದೆ.
ಅಕ್ಟೋಬರ್ 3 ರಂದು ಮತಗಳನ್ನು ಎಣಿಕೆ ಮಾಡಲಾಗುವುದು ಎಂದು ತನ್ನ ಅಧಿಸೂಚನೆಯಲ್ಲಿ ತಿಳಿಸಿರುವ ಚುನಾವಣಾ ಆಯೋಗ ಬಂಗಾಳದ ಇತರ ಕ್ಷೇತ್ರಗಳಾದ ಸಂಸರ್‌ಗಂಜ್ ಹಾಗೂ ಜಂಗೀಪುರ ಮತ್ತು ಒಡಿಶಾದ ಪಿಪ್ಲಿಯ ಸ್ಥಾನಗಳಿಗೆ ಉಪಚುನಾವಣೆ ದಿನಾಂಕಗಳನ್ನು ಘೋಷಿಸಿದೆ.
ಆದಾಗ್ಯೂ, ಕೋವಿಡ್ -19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇತರ 31 ಕ್ಷೇತ್ರಗಳ ಉಪಚುನಾವಣೆಯನ್ನು ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪಶ್ಚಿಮ ಬಂಗಾಳ ರಾಜ್ಯದಿಂದ ಸಾಂವಿಧಾನಿಕ ತುರ್ತುಸ್ಥಿತಿ ಹಾಗೂ ವಿಶೇಷ ವಿನಂತಿಯನ್ನು ಪರಿಗಣಿಸಿ, ಎಸಿ 159 - ಭಬನಿಪುರಕ್ಕೆ ಉಪಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಸಂಬಂಧಿತ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಆಯಾ ಮುಖ್ಯ ಚುನಾವಣಾಧಿಕಾರಿಗಳ ಅಭಿಪ್ರಾಯಗಳನ್ನು ಪರಿಗಣಿಸಿದ ನಂತರ ಆಯೋಗವು ಇತರ 31 ವಿಧಾನಸಭಾ ಕ್ಷೇತ್ರಗಳು ಹಾಗೂ 3 ಸಂಸತ್ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಸದಿರಲು ನಿರ್ಧರಿಸಿದೆ ಎಂದು ಚುನಾವಣಾ ಹೇಳಿದೆ.







