ವಾರಾಂತ್ಯ ಕರ್ಫ್ಯೂ ವೇಳೆ ಸಿಗದ ಅವಕಾಶ: ಜವಳಿ, ಚಪ್ಪಲಿ ವ್ಯಾಪಾರಿಗಳ ತೀವ್ರ ಆಕ್ರೋಶ

ಮಂಗಳೂರು, ಆ.ಸೆ.4: ಕೊರೋನ ಸೋಂಕಿನ ಪ್ರಮಾಣ ತಡೆಗಟ್ಟುವ ಸಲುವಾಗಿ ದ.ಕ.ಜಿಲ್ಲಾಡಳಿತವು ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 5ರವರೆಗೆ ವಾರಾಂತ್ಯ ಕರ್ಫ್ಯೂ ಮಧ್ಯೆ ಶನಿವಾರ ಮತ್ತು ರವಿವಾರ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿದರೂ ಕೂಡ ಜವಳಿ, ಚಪ್ಪಲಿ, ಫ್ಯಾನ್ಸಿ, ಬ್ಯಾಗ್ ಅಂಗಡಿಗಳನ್ನು ತೆರೆಯದಂತೆ ನಿರ್ಬಂಧ ಹೇರಿರುವ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಶನಿವಾರ ಈ ಅಂಗಡಿಗಳ ಮಾಲಕರು ಅಂಗಡಿಗಳನ್ನು ತೆರೆದಿಟ್ಟು ವ್ಯಾಪಾರ ಮಾಡದೆ ಜಿಲ್ಲಾಡಳಿತದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರೂ ಕೂಡ ಜಿಲ್ಲಾಧಿಕಾರಿಯ ಮನವಿಯ ಮೇರೆಗೆ ಕೊನೆಯ ಕ್ಷಣದಲ್ಲಿ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ. ಮುಂದಿನ ವಾರವೂ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸದಿದ್ದರೆ ಅಂಗಡಿ-ಮಳಿಗೆಗಳನ್ನು ತೆರೆದಿಟ್ಟು ವ್ಯಾಪಾರದ ಮಾಡದೆ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವೀಕೆಂಡ್ ಕರ್ಫ್ಯೂ ಹಿನ್ನಲೆಯಲ್ಲಿ ಶನಿವಾರ ಬೆಳಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಅದರಲ್ಲಿ ದಿನಸಿ ಅಂಗಡಿ, ಹಣ್ಣು, ತರಕಾರಿ, ಮಾಂಸ ಮತ್ತಿತರ ಸಹಿತ ಬಹುತೇಕ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿತ್ತು. ಬಸ್, ರಿಕ್ಷಾ ಸಹಿತ ಖಾಸಗಿ ವಾಹನಗಳ ಓಡಾಟಕ್ಕೆ ದಿನವಿಡೀ ಅವಕಾಶ ನೀಡಲಾಗಿತ್ತು. ಆದರೆ, ಜವಳಿ, ಚಪ್ಪಲಿ, ಫ್ಯಾನ್ಸಿ, ಬ್ಯಾಗ್ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿರಲಿಲ್ಲ. ಇದು ವ್ಯಾಪಾರಿಗಳ ಮಾತ್ರವಲ್ಲ, ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಕೊರೋನ ಸೋಂಕಿನ ಸಂಖ್ಯೆಯನ್ನು ಇಳಿಸಲು ಕೇಂದ್ರ ಮತ್ತು ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಜಿಲ್ಲಾಡಳಿತವು ದಿನಕ್ಕೊಂದು ನಿಯಮಾವಳಿ ರೂಪಿಸುತ್ತಿತ್ತು. ಕೊರೋನ 2ನೆ ಅಲೆಯ ಸಂದರ್ಭ ವಿಧಿಸಲಾದ ಲಾಕ್ ಡೌನ್ ಹಂತ ಹಂತವಾಗಿ ತೆರವುಗೊಳಿಸಿದರೂ ಕೂಡ ಜವಳಿ, ಚಪ್ಪಲಿ, ಫ್ಯಾನ್ಸಿ, ಬ್ಯಾಗ್‌ಗಳ ಅಂಗಡಿಗಳನ್ನು ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಇದರ ವಿರುದ್ಧ ವ್ಯಾಪಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು ಪ್ರತಿಭಟನೆ ನಡೆಸಿದ್ದರು. ಕೆಲವು ದಿನಗಳ ಬಳಿಕ ಅನುಮತಿ ನೀಡಿದ್ದರೂ ಕೂಡ ವಾರಾಂತ್ಯ ಕರ್ಫ್ಯೂ ವೇಳೆ ಮತ್ತೆ ಅವಕಾಶ ನಿರಾಕರಿಸಲಾಗಿತ್ತು. ಈ ಬಗ್ಗೆಯೂ ಮನವಿ, ಪ್ರತಿಭಟನೆ ನಡೆದಿತ್ತು.
ಅರ್ಥವಿಲ್ಲದ ವೀಕೆಂಡ್ ಕರ್ಫ್ಯೂ: ವಿಕೆಂಡ್ ಕರ್ಫ್ಯೂ ಎಂಬುದು ಅರ್ಥಹೀನ. ಸರಕಾರಕ್ಕೆ ಇಂತಹ ಸಲಹೆ ನೀಡಿದ ತಜ್ಞರು ಯಾರು ಎಂಬುದು ಬಹಿರಂಗಗೊಳ್ಳಬೇಕಿದೆ? ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಿದ್ದರೂ ಕೂಡ ಜವಳಿ, ಚಪ್ಪಲಿ ಅಂಗಡಿಗಳ ವ್ಯಾಪಾರಕ್ಕೆ ನಿರ್ಬಂಧ ಯಾಕೆ? ಕೇವಲ ಈ ಅಂಗಡಿಗಳಿಂದ ಮಾತ್ರ ಕೊರೋನ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತದೆಯೇ? ರಾಜ್ಯ ಸರಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಜವಳಿ ವರ್ತಕರ ಸಂಘದ ಮುಖಂಡ ಎಂಬಿ ಸದಾಶಿವ ಒತ್ತಾಯಿಸಿದ್ದಾರೆ.







