"ಇನ್ಫೋಸಿಸ್ ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ" ಎಂದ ಆರೆಸ್ಸೆಸ್ ಮುಖವಾಣಿ 'ಪಾಂಚಜನ್ಯ' ಲೇಖನ

ಹೊಸದಿಲ್ಲಿ: ಹೊಸ ಐಟಿ ವೆಬ್‍ತಾಣದಲ್ಲಿ ಕಂಡು ಬಂದಿರುವ ತಾಂತ್ರಿಕ ದೋಷಗಳ ಕುರಿತು ಪ್ರತಿಕ್ರಿಯಿಸಿರುವ ಆರೆಸ್ಸೆಸ್ ಬೆಂಬಲಿತ ಪಾಂಚಜನ್ಯ ಸಾಪ್ತಾಹಿಕವು ತನ್ನ ಸೆಪ್ಟೆಂಬರ್ ತಿಂಗಳ ಸಂಚಿಕೆಯಲ್ಲಿನ ಲೇಖನವೊಂದರಲ್ಲಿ ಐಟಿ ಸಂಸ್ಥೆ ಇನ್ಫೋಸಿಸ್ ವಿರುದ್ಧ ಕಿಡಿ ಕಾರಿದೆ. ಹೊಸ ಐಟಿ ವೆಬ್‍ತಾಣ ರಚಿಸುವ ಜವಾಬ್ದಾರಿಯನ್ನು ಕೇಂದ್ರ ಸರಕಾರ ಈ ಸಂಸ್ಥೆಗೆ ವಹಿಸಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು. ಆರಂಭದಲ್ಲಿ ಸಮಸ್ಯೆ ಎದುರಿಸಿದ್ದ ಜಿಎಸ್‍ಟಿ ವೆಬ್ ತಾಣ ಹಾಗೂ ಎಂಸಿಎ-21 ವೆಬ್ ತಾಣವನ್ನೂ ಇನ್ಫೋಸಿಸ್ ಅಭಿವೃದ್ಧಿಪಡಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಐಟಿ ವೆಬ್ ತಾಣದಲ್ಲಿ ಕಂಡು ಬಂದಿರುವ ಹಲವು ಸಮಸ್ಯೆಗಳನ್ನು ಉಲ್ಲೇಖಿಸಿ "ಇನ್ಫೋಸಿಸ್ ಆಡಳಿವು ಉದ್ದೇಶಪೂರ್ವಕವಾಗಿ ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂಬ ಆರೋಪಗಳಿವೆ" ಎಂದು ಪಾಂಚಜನ್ಯದಲ್ಲಿ ಬರೆಯಲಾಗಿದೆ.
ಆದರೆ ಈ ಆರೋಪ ಯಾರು ಮಾಡಿದ್ದಾರೆ ಹಾಗೂ ಅದಕ್ಕೆ ಆಧಾರವೇನು ಎಂಬ ಬಗ್ಗೆ ಚಕಾರವೆತ್ತದ ಚಂದ್ರ ಪ್ರಕಾಶ್ ಎಂಬವರು ಬರೆದ ಈ ವರದಿಯು "ಇನ್ಫೋಸಿಸ್ ಯಾವಾಗಲೂ ಕಡಿಮೆ ಬಿಡ್ ಮಾಡಿ ದೊಡ್ಡ ಸರಕಾರಿ ಯೋಜನೆಗಳ ಬಿಡ್ ಹೇಗೆ ಪಡೆಯುತ್ತಿದೆ" ಎಂದು ಪ್ರಶ್ನಿಸಿದೆಯಲ್ಲದೆ ಐಟಿ ವೆಬ್ ತಾಣದಲ್ಲಿರುವ ಸಮಸ್ಯೆಗಳಿಂದಾಗಿ ತೆರಿಗೆದಾರರ ಆತ್ಮವಿಶ್ವಾಸ ಕುಸಿಯುವಂತೆ ಮಾಡಿದೆ ಎಂದು ಬರೆದಿದೆ.
ಇನ್ಫೋಸಿಸ್ ವಿದೇಶಿ ಸಂಸ್ಥೆಗಳಿಗೆ ಒದಗಿಸುವ ಸೇವೆಯಲ್ಲೂ ಇಷ್ಟೇ ನಿರ್ಲಕ್ಷ್ಯ ತೋರುತ್ತದೆಯೇ ಎಂದು ಲೇಖನ ಪ್ರಶ್ನಿಸಿದೆ.
ಐಟಿ ವೆಬ್ ತಾಣದ ಸಮಸ್ಯೆಗಳ ಬಗ್ಗೆ ವಿಪಕ್ಷಗಳ ಮೌನದ ಕುರಿತೂ ಲೇಖನದಲ್ಲಿ ಬರೆಯಲಾಗಿದೆಯಲ್ಲದೆ ʼಕಾಂಗ್ರೆಸ್ ಪ್ರಚೋದನೆಯಿಂದ ಕೆಲ ಖಾಸಗಿ ಕಂಪೆನಿಗಳು ಈ ರೀತಿಯ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆಯೇ ಎಂದು ಜನರು ಕೇಳುತ್ತಿದ್ದಾರೆ" ಎಂದು ಲೇಖನದಲ್ಲಿ ಬರೆಯಲಾಗಿದೆ.







