ಉಡುಪಿಗೆ ವಾರಾಂತ್ಯ ಕರ್ಫ್ಯೂ ಅಗತ್ಯವಿಲ್ಲ: ಸತೀಶ್ ಮಲ್ಪೆ
ಉಡುಪಿ, ಸೆ.4: ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ವಾರಾಂತ್ಯ ಕರ್ಪ್ಯೂ ಅಗತ್ಯವಿಲ್ಲ. ಈಗಷ್ಟೇ ಮಲ್ಪೆ ಮೀನುಗಾರರು ಸ್ವಲ್ಪ ಚೇತರಿಕೆ ಕಂಡು ಕೊಂಡಿದ್ದು. ಬೆಳಗ್ಗೆ 3ರಿಂದ ರಾತ್ರಿ 11 ಗಂಟೆಯವರೆಗೂ ಬಂದರಿನಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿವೆ ಎಂದು ಮಲ್ಪೆ ಮೀನುಗಾರರ ಸಂಘದ ಸತೀಶ್ ಮಲ್ಪೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾರಾಂತ್ಯದ ಕರ್ಫ್ಯೂನಿಂದ ಆಟೋರಿಕ್ಷಾ, ಬಸ್ಸುಗಳ ಸಂಚಾರ ಇಲ್ಲವಾಗಿದ್ದು, ದೂರದ ಊರಿಗೆ ಹೋಗುವ ಮೀನುಗಾರರಿಗೆ ಹಾಗು ಮಹಿಳೆ ಯರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಮಲ್ಪೆ ಬಂದರಲ್ಲಿ ದಿನಕ್ಕೆ 35ರಿಂದ 40 ಸಾವಿರ ಜನ ಮೀನುಗಾರಿಕಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೇರೆ ಊರಿನಿಂದ ಹಾಗೂ ಹೊರ ರಾಜ್ಯದಿಂದಲೂ ಜನ ಇಲ್ಲಿ ವ್ಯಾಪಾರಕ್ಕಾಗಿ ಬರ್ತಾರೆ ಎಂದವರು ವಿವರಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೋನ ಉತ್ತುಂಗ ಸ್ಥಿತಿ ಯಲ್ಲಿ ಇರುವಾಗಲೂ ಇಲ್ಲಿ ಯಾರಿಗೂ ವೈರಸ್ ಅಂಟಿಸಿಕೊಂಡಿಲ್ಲ. ಹದಿನೈದು ದಿನಕ್ಕೊಮ್ಮೆ ಬರುವ ಟ್ರಾಲ್ ಬೋಟಿಗೆ 6000 ಲೀ. ಡಿಸೇಲ್ ಬೇಕು. ಅಂದರೆ ಸುಮಾರು 4-5 ಲಕ್ಷ ರೂ. ಖರ್ಚಾಗುತ್ತದೆ. ಮೀನು ಸಿಗಲಿಲ್ಲ ಎಂದರೆ ಡಿಸೇಲ್ ವ್ಯರ್ಥವಾಗುತ್ತದೆ. ಈಗ ಮೀನು ಸಿಗುವ ಈ ಸಮಯದಲ್ಲಿ ಮೀನುಗಾರಿಕೆ ಮಾಡದೇ ಇದ್ದರೆ, ಮುಂದೆ ಮೀನುಗಾರರಿಗೆ ತುಂಬಾ ಕಷ್ಟದ ಪರಿಸ್ಥಿತಿ ಬಂದೇ ಬರುತ್ತೆ. ಆದರಿಂದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದು ಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.







