ನಾಲ್ಕನೇ ಟೆಸ್ಟ್ : ರೋಹಿತ್ ಶರ್ಮಾ 8ನೇ ಶತಕ, ಮುನ್ನಡೆ ಹೆಚ್ಚಿಸಲು ಭಾರತ ಯತ್ನ

ಲಂಡನ್: ಭಾರತದ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದದ ನಾಲ್ಕನೇ ಟೆಸ್ಟ್ ನ 3ನೇ ದಿನವಾದ ಶನಿವಾರ ಆಕರ್ಷಕ ಶತಕ ಸಿಡಿಸಿ ತಂಡವು ಉತ್ತಮ ಮುನ್ನಡೆ ಪಡೆಯಲು ನೆರವಾಗುತ್ತಿದ್ದಾರೆ.
ಮುಂಬೈ ಬ್ಯಾಟ್ಸ್ ಮನ್ ರೋಹಿತ್ ಸ್ಪಿನ್ನರ್ ಮೊಯಿನ್ ಅಲಿ ಬೌಲಿಂಗ್ ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ 204 ಎಸೆತಗಳಲ್ಲಿ(12 ಬೌಂಡರಿ, 1 ಸಿಕ್ಸರ್ )8ನೇ ಶತಕವನ್ನು ಪೂರೈಸಿದರು. ಚೇತೇಶ್ವರ ಪೂಜಾರ ಅವರೊಂದಿಗೆ 2ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 100 ರನ್ ಗಳಿಸಿ ತಂಡಕ್ಕೆ ಮುನ್ನಡೆ ಒದಗಿಸಲು ಶ್ರಮಿಸುತ್ತಿದ್ದಾರೆ.
ಇದೇ ವೇಳೆ ರೋಹಿತ್ ತಾನಾಡಿದ 43ನೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 3,000 ರನ್ ಪೂರೈಸಿದರು.
ಶನಿವಾರ ವಿಕೆಟ್ ನಷ್ಟವಿಲ್ಲದೆ 43 ರನ್ ನಿಂದ 2ನೇ ಇನಿಂಗ್ಸ್ ಮುಂದುವರಿಸಿದ ಭಾರತಕ್ಕೆ ರೋಹಿತ್ ಹಾಗೂ ಕೆಎಲ್ ರಾಹುಲ್ ಮೊದಲ ವಿಕೆಟ್ ಗೆ 83 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ರಾಹುಲ್ 46 ರನ್(101 ಎಸೆತ)ಗಳಿಸಿ ಆ್ಯಂಡರ್ಸನ್ ಗೆ ವಿಕೆಟ್ ಒಪ್ಪಿಸಿದರು.
ಭಾರತವು 66 ಓವರ್ ಗಳ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದ್ದು, ಒಟ್ಟು 97 ರನ್ ಮುನ್ನಡೆಯಲ್ಲಿದೆ.