ರೈತ ಹೋರಾಟಗಾರರ ಜತೆ ಮಾತುಕತೆಗೆ ಸದಾ ಸಿದ್ಧ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕಲಬುರಗಿ, ಸೆ.4: ಕೇಂದ್ರ ಸರಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ಮಾಡತ್ತಿರುವ ರೈತ ಮುಖಂಡರೊಂದಿಗೆ ಈಗಾಗಲೇ 11 ಸುತ್ತು ಮಾತುಕತೆಯಾಗಿದೆ. ಕೃಷಿ ಕಾಯ್ಕೆಗಳ ಕುರಿತು ರೈತರಿಗೆ ಮನವರಿಕೆ ಮಾಡಿಕೊಡಲು ಅವರೊಂದಿಗೆ ಮಾತನಾಡಲು ಸರಕಾರ ಸದಾ ಸಿದ್ಧವಿದೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಕೃಷಿ ಕಾಯ್ದೆ ಬಿಲ್ ಯಾಕೆ ಮಾಡಿದೆ ಎಂಬುದನ್ನು ರೈತ ನಾಯಕರು ಅರ್ಥ ಮಾಡಿಕೊಳ್ಳಬೇಕು. ಕೃಷಿ ಕಾಯ್ದೆಗಳನ್ನು ರೈತರಿಗೆ ಅರ್ಥೈಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಾತುಕತೆಗೆ ಸಿದ್ಧವಿದೆ ಎಂದು ಹೇಳಿದ್ದಾರೆ.
ರೈತರ ಆತ್ಮಹತ್ಯೆ ಪ್ರಕರಣಗಳು ನಿಲ್ಲಬೇಕಾದರೆ ರೈತರ ಆದಾಯ ಹೆಚ್ಚಾಗಬೇಕು. ಕೃಷಿ ಲಾಭದಾಯಕವಾದರೆ ಹಳ್ಳಿಯ ಯುವಕರು ವಲಸೆ ಹೋಗುವುದು ತಪ್ಪುತ್ತದೆ. ಕೇಂದ್ರ ಸರಕಾರದ ಜಾರಿ ಮಾಡುವ ಕೃಷಿ ಯೋಜನೆಗಳನ್ನು ರೈತರು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕೆಂದು ಅವರು ಹೇಳಿದ್ದಾರೆ.
ಕೃಷಿ ಉತ್ಪನ್ನ ರಫ್ತು ಮಾಡುವಲ್ಲಿ ನಾವು 9ನೇ ಸ್ಥಾನಕ್ಕೆ ಬಂದಿದ್ದೇವೆ. ಶೇ.70ರಷ್ಟು ಎಣ್ಣೆ ಕಾಳುಗಳನ್ನು ಬೇರೆ ದೇಶದಿಂದ ತರಿಸಿಕೊಳ್ಳುತ್ತಿದ್ದೇವೆ. ಎಣ್ಣೆ ಕಾಳಿನಲ್ಲಿ ನಾವು ಸ್ವಾವಲಂಬಿ ಆಗಬೇಕು. ಅದಕ್ಕಾಗಿ ಎಣ್ಣೆ ಕಾಳು ಬಿತ್ತನೆ ಬೀಜಗಳನ್ನು ನಾವು ರೈತರಿಗೆ ಉಚಿತವಾಗಿ ಕೊಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಸಣ್ಣ ರೈತರನ್ನು ಒಟ್ಟುಗೂಡಿಸಿ ಸಂಘಗಳನ್ನು ಮಾಡುವ ಕೆಲಸ ಮಾಡಬೇಕಾಗುತ್ತದೆ. ಸಣ್ಣರೈತರಿಗೆ ಕೃಷಿ ಸಾಧನಗಳನ್ನು ಬಾಡಿಗೆಗೆ ಕೋಡುವ ಕೆಲಸ ಮಾಡಬೇಕಿದೆ. ಕೃಷಿ ಉತ್ಪನ್ನ ಉತ್ಪಾದನೆ, ಮಾರ್ಕೆಟಿಂಗ್‍ಗೆ ಕೇಂದ್ರ ಸರಕಾರ ಒತ್ತುಕೊಡುತ್ತಿದೆ. ತೊಗರಿ ಕಾಳಿಗೆ 6,300, ಹೆಸರು ಕಾಳಿಗೆ 7,200 ರೂ. ಎಂಎಸ್‍ಪಿ ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.







