ಅಕ್ಟೋಬರ್ ನೊಳಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರೀಯ ವಿವಿಗಳಿಗೆ ಶಿಕ್ಷಣ ಸಚಿವರ ಸೂಚನೆ

ಹೊಸದಿಲ್ಲಿ,ಸೆ.4: ಕೇಂದ್ರೀಯ ವಿವಿಗಳಲ್ಲಿ ಖಾಲಿಯಿರುವ 6,229 ಹುದ್ದೆಗಳನ್ನು ಭರ್ತಿ ಮಾಡಲು ಅವುಗಳಿಗೆ ಎರಡು ತಿಂಗಳ ಗಡುವನ್ನು ವಿಧಿಸಲಾಗಿದೆ. ಈ ವಿವಿಗಳಲ್ಲಿ ಈಗ ಖಾಲಿಯಿರುವ ಹುದ್ದೆಗಳು ಒಟ್ಟು ಮಂಜೂರಾಗಿರುವ ಹುದ್ದೆಗಳ ಮೂರನೇ ಒಂದರಷ್ಟಿವೆ.
45 ಕೇಂದ್ರಿಯ ವಿವಿಗಳ ಕುಲಪತಿಗಳೊಂದಿಗೆ ತನ್ನ ಮೊದಲ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಅವರು, ಒಂದು ಆಂದೋಲನದ ರೀತಿಯಲ್ಲಿ ಕೆಲಸ ಮಾಡೋಣ. ‘ಶಿಕ್ಷಕ ಪರ್ವ್ ’ಸಂದರ್ಭದಲ್ಲಿ ಸೆಪ್ಟಂಬರ್ ಮತ್ತು ಅಕ್ಟೋಬರ್ನೊಳಗೆ ಈ 6,229 ಹುದ್ದೆಗಳನ್ನು ತುಂಬುವ ಅಭಿಯಾನವನ್ನು ಆರಂಭಿಸೋಣ. ಕೆಲವು ವಿವಿಗಳಲ್ಲಿ ಕೆಲವು ಸಮಸ್ಯೆಗಳು ಇರಬಹುದು,ಆದರೆ ಎಲ್ಲ ವಿವಿಗಳು ತಮ್ಮಲ್ಲಿನ ಖಾಲಿ ಹುದ್ದೆಗಳ ಕುರಿತು ಸೆ.10ರೊಳಗೆ ಜಾಹೀರಾತುಗಳನ್ನು ಪ್ರಕಟಿಸಿಬೇಕು ಎಂದು ಹೇಳಿದರು.
ಜಾಹೀರಾತು ನೀಡಿದ್ದರೂ ಭರ್ತಿಯಾಗದೆ ಉಳಿದಿರುವ ಬ್ಯಾಕ್ಲಾಗ್ ಹುದ್ದೆಗಳು ಮತ್ತು ಎಸ್ಸಿ,ಎಸ್ಟಿ ಹಾಗೂ ಒಬಿಸಿಗಳಿಗೆ ಮೀಸಲಾಗಿರುವ ಖಾಲಿಹುದ್ದೆಗಳ ಬಗ್ಗೆ ವಿಶೇಷ ಗಮನವನ್ನು ಹರಿಸಬೇಕಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕುಲಪತಿಗಳು ತಿಳಿಸಿದರು.
6,229 ಖಾಲಿ ಹುದ್ದೆಗಳ ಪೈಕಿ ಒಬಿಸಿಗಳಿಗೆ 1,767,ಎಸ್ಸಿಗಳಿಗೆ 1,012 ಮತ್ತು ಎಸ್ಟಿಗಳಿಗೆ 592 ಹುದ್ದೆಗಳು ಮೀಸಲಾಗಿವೆ ಎಂದು ಪ್ರಧಾನ್ ಹೇಳಿದರು.
ಕೋವಿಡ್-19 ಬಿಕ್ಕಟ್ಟಿನಿಂದ ಮುಚ್ಚಲ್ಪಟ್ಟಿದ್ದ ಶಿಕ್ಷಣ ಸಂಸ್ಥೆಗಳು ಪುನರಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಅವರು,ವಿದ್ಯಾರ್ಥಿಗಳೊಂದಿಗೆ ಹೊಂದಾಣಿಕೆಯಿಂದಿರುವಂತೆ,ಆದರೆ ಬೋಧನೆಗೆ ಮತ್ತು ಕಲಿಕೆಗೆ ಯಾವುದೇ ವ್ಯತ್ಯಯವುಂಟಾಗದಂತೆ ನೋಡಿಕೊಳ್ಳಲು ಕುಲಪತಿಗಳಿಗೆ ಸೂಚಿಸಿದರು.







