ಹೈಕೋರ್ಟ್ ಗಳ ನ್ಯಾಯಾಧೀಶರಾಗಿ ನೇಮಕಕ್ಕೆ 68 ಹೆಸರುಗಳನ್ನು ಶಿಫಾರಸು ಮಾಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಸೆ.4: ಹನ್ನೆರಡು ಉಚ್ಚ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಪದೋನ್ನತಿಗಾಗಿ 68 ಹೆಸರುಗಳನ್ನು ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ. ಉಚ್ಚ ನ್ಯಾಯಾಲಯಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬುವ ಪ್ರಯತ್ನವಾಗಿ ಸರ್ವೋಚ್ಚ ನ್ಯಾಯಾಲಯವು ಏಕಕಾಲದಲ್ಲಿ ಇಷ್ಟೊಂದು ಹೆಸರುಗಳನ್ನು ಶಿಫಾರಸು ಮಾಡಿರುವುದು ಇದೇ ಪ್ರಥಮವಾಗಿದೆ.
25 ಉಚ್ಚ ನ್ಯಾಯಾಲಯಗಳಲ್ಲಿ ಮಂಜೂರಾದ ನ್ಯಾಯಾಧೀಶರ ಬಲ 1,098 ಆಗಿದ್ದು,ಸೆ.1ಕ್ಕೆ ಇದ್ದಂತೆ 465 ಹುದ್ದೆಗಳು ಖಾಲಿಯಾಗಿವೆ.
ಭಾರತದ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ನೇತೃತ್ವದ ಮೂವರು ಸದಸ್ಯರ ಕೊಲಿಜಿಯಂ ಅಲಹಾಬಾದ್,ಕೇರಳ,ರಾಜಸ್ಥಾನ,ಕೋಲ್ಕತಾ,ಜಾರ್ಖಂಡ್, ಗುವಾಹಟಿ, ಪಂಜಾಬ್ ಮತ್ತು ಹರ್ಯಾಣ, ಜಮ್ಮು-ಕಾಶ್ಮೀರ, ಮದ್ರಾಸ್, ಛತ್ತೀಸ್ಗಡ, ಕರ್ನಾಟಕ ಹಾಗೂ ಮಧ್ಯಪ್ರದೇಶ ಉಚ್ಚ ನ್ಯಾಯಾಲಯಗಳಿಗೆ ಈ ಹೆಸರುಗಳನ್ನು ಶಿಫಾರಸು ಮಾಡಿದೆ.
ಪ್ರಸ್ತಾಪಿಸಲಾಗಿರುವ ಹೆಸರುಗಳಲ್ಲಿ 44 ವಕೀಲರು ಮತ್ತು 24 ನ್ಯಾಯಾಂಗ ಅಧಿಕಾರಿಗಳು ಸೇರಿದ್ದಾರೆ. ನ್ಯಾಯಾಧೀಶರಾಗಿ ಪದೋನ್ನತಿಗಾಗಿ ಕೇಂದ್ರ ಸರಕಾರವು ಈ ಹೆಸರುಗಳನ್ನು ಅನುಮೋದಿಸುವ ಅಗತ್ಯವಿದೆ.
ಶಿಫಾರಸು ಮಾಡಲ್ಪಟ್ಟವರಲ್ಲಿ 10 ಮಹಿಳೆಯರು ಸೇರಿದ್ದಾರೆ. ಇವರ ಪೈಕಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳಾ ನ್ಯಾಯಾಂಗ ಅಧಿಕಾರಿ ಮಾರ್ಲಿ ವಾನ್ಕುಂಗ್ ಅವರು ಗುವಾಹಟಿ ಉಚ್ಚ ನ್ಯಾಯಾಲಯಕ್ಕೆ ಪದೋನ್ನತಿಗೊಂಡರೆ ಮಿರೆರಾಮ್ ಮೂಲದ ಮೊದಲ ಹೈಕೋರ್ಟ್ ನ್ಯಾಯಾಧೀಶೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಪುನರ್ಪರಿಶೀಲನೆಗಾಗಿ ಈ ಹಿಂದೆ ಸರ್ವೋಚ್ಚ ನ್ಯಾಯಾಲಯಕ್ಕೆ ಮರಳಿಸಿದ್ದ ಒಂಭತ್ತು ವಕೀಲರು ಮತ್ತು ಮೂವರು ನ್ಯಾಯಾಂಗ ಅಧಿಕಾರಿಗಳ ಹೆಸರುಗಳನ್ನು ಕೊಲಿಜಿಯಂ ಪುನಃ ಶಿಫಾರಸು ಮಾಡಿದೆ.







