ಅಪಘಾತ ಪ್ರಕರಣ: ಬಸ್ ಚಾಲಕನಿಗೆ 2.9 ವರ್ಷ ಜೈಲು ಶಿಕ್ಷೆ
ಉಡುಪಿ, ಸೆ.4: ಅಪಘಾತ ನಡೆಸಿ ಬೈಕ್ ಸವಾರನ ಸಾವಿಗೆ ಕಾರಣನಾದ ಬಸ್ ಚಾಲಕನಿಗೆ 2.9ವರ್ಷ ಜೈಲುಶಿಕ್ಷೆ ವಿಧಿಸಿ ಉಡುಪಿ ಒಂದನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ಆ.30ರಂದು ಆದೇಶ ನೀಡಿದೆ.
ಉಡುಪಿ ಕೊಳಂಬೆ ನಿವಾಸಿ ಬಿಜಯ್ ಕುಮಾರ್ ಮಲಿಕ್ ಶಿಕ್ಷೆಗೆ ಗುರಿ ಯಾಗಿರುವ ಆರೋಪಿ. ಈತ 2016ರ ನ.6ರಂದು ಕುಂದಾಪುರ ಕಡೆಯಿಂದ ಬ್ರಹ್ಮಾವರ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಸ್ಸನ್ನು ಅತೀವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸತೀಶ್ ಪ್ರಭು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆಸಿದ್ದನು.
ಇದರಿಂದ ರಸ್ತೆಗೆ ಬಿದ್ದ ಸತೀಶ್ ಪ್ರಭು ತಲೆಯ ಮೇಲೆ ಬಸ್ಸಿನ ಚಕ್ರ ಹರಿಯಿತು. ಇದರಿಂದ ಗಂಭೀರವಾಗಿ ಗಾಯಗೊಂಡ ಸತೀಶ್ ಪ್ರಭು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರು. ಈ ಬಗ್ಗೆ ಆಗಿನ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್ ಕೆ. ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಧೀಶ ಶ್ಯಾಮ್‌ಪ್ರಕಾಶ್, ಸಾಕ್ಷ ಹಾಗೂ ವಾದ ಪ್ರತಿವಾದವನ್ನು ಆಲಿಸಿ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗೆ ಎರಡು ವರ್ಷ 9 ತಿಂಗಳು ಜೈಲು ಶಿಕ್ಷೆ ಮತ್ತು 11ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ. ವಾದ ಮಂಡಿಸಿದ್ದರು.







