‘ಅರಿಶಿನ ಗಣಪತಿ ಅಭಿಯಾನ’ದಲ್ಲಿ ಭಾಗವಹಿಸಿ: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಸೆ.4: ಈ ಬಾರಿಯ ಗೌರಿ ಗಣೇಶ ಹಬ್ಬ ಸನ್ನಿಹಿತವಾಗುತ್ತಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಹಾಗೂ ವಿಷಯುಕ್ತ ರಾಸಾಯನಿಕ ಬಣ್ಣಗಳನ್ನು ಹೊಂದಿದ ಲಕ್ಷಾಂತರ ಗಣಪತಿ ವಿಗ್ರಹಗಳನ್ನು ನದಿ, ಕೆರೆ-ಕಟ್ಟೆಗಳಲ್ಲಿ ವಿಸರ್ಜನೆಗೊಳಿಸುವುದರಿಂದ ನೀರಿನ ಮೂಲಗಳು ಮಾಲಿನ್ಯಗೊಳ್ಳ ಲಿರುವುದರಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಸೂಚನೆಯಂತೆ ಪಿಒಪಿ ಹಾಗೂ ಬಣ್ಣದ ಗಣಪತಿ ಮೂರ್ತಿಗಳನ್ನು ನಿರ್ಬಂಧಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಹಾಗೂ ಕೋವಿಡ್-19ರ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಬಾರಿಯ ಗೌರಿ ಗಣೇಶ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುವ ಅನಿವಾರ್ಯತೆ ಇದೆ. ವಿಷಯುಕ್ತ ರಾಸಾಯನಿಕ ಬಣ್ಣಗಳನ್ನು ಹೊಂದಿದ ಗಣಪತಿ ವಿಗ್ರಹಗಳನ್ನು ನದಿ ಕೆರೆಗಳಲ್ಲಿ ವಿಸರ್ಜಿಸಿದಲ್ಲಿ ನಮ್ಮ ಅಮೂಲ್ಯವಾದ ನೀರಿನ ಮೂಲಗಳನ್ನು ಹಾಳು ಮಾಡಿದಂತಾಗುತ್ತದೆ. ಇದರ ಬದಲು ಮನೆ ಮನೆಗಳಲ್ಲಿ ರೋಗನಿರೋಧಕ ಶಕ್ತಿಯುಳ್ಳ, ಅರಿಶಿನ ಮಿಶ್ರಿತವಾದ ಗೋಧಿಹಿಟ್ಟು ಅಥವಾ ರಾಗಿಹಿಟ್ಟಿನಿಂದ ಮಾಡಿದ ಪುಟ್ಟ ಗಣೇಶನ ವಿಗ್ರಹಗಳನ್ನು ಮಾಡಿ ಪೂಜಿಸಬಹುದು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಸಲಹೆ ನೀಡಿದ್ದಾರೆ.
ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳನ್ನು ಬಳಸಿ ಪೂಜಿಸುವ ಬದಲು, ಹೂವು ಪತ್ರೆಗಳಿಂದ ಗಣಪತಿಯನ್ನು ಸಿಂಗರಿಸಬಹುದು. ಹಾಗೇ ಅರಿಶಿನ ಗಣೇಶನನ್ನು ಕೂರಿಸಲು ಪೀಠವಾಗಿ ತೆಂಗಿನಚಿಪ್ಪಿನ ಕರಟವನ್ನು ಉಪಯೋಗಿಸಬಹುದು. ಈ ರೀತಿ ಮಾಡಿದಲ್ಲಿ ನಮ್ಮ ನದಿ ತೊರೆಗಳು, ಕೆರೆಕಟ್ಟೆಗಳು ಮಾಲಿನ್ಯ ವಾಗುವುದನ್ನು ತಪ್ಪಿಸಬಹುದಾಗಿದೆ. ಅದೂ ಅಲ್ಲದೇ ಕೋವಿಡ್ -19ಗೆ ಅಗತ್ಯವಿರುವ ಸುರಕ್ಷಿತ ಅಂತರ ಕೂಡ ಕಾಪಾಡಿಕೊಂಡಂತಾಗುತ್ತದೆ ಎಂದು ಕೂರ್ಮಾ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಜನಾಂದೋಲನ ರೂಪಿಸುವ ಸದುದ್ದೇಶದಿಂದ ಈ ಬಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯಾದ್ಯಂತ ‘10 ಲಕ್ಷ ಅರಿಶಿನ ಗಣಪತಿ ಅಭಿಯಾನ’ ಹಮ್ಮಿಕೊಂಡಿದ್ದು ಇದರಂತೆ ಸಾರ್ವಜ ನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿ ಅರಿಶಿನ ಗಣಪತಿಯನ್ನು ತಯಾರಿಸಿ, ಪೂಜಿಸಿ, ಗಣಪತಿಯೊಂದಿಗಿನ ತಮ್ಮ ಸೆಲ್ಫಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬಹುದಾಗಿದೆ. ಅಲ್ಲದೇ ಬಂಪರ್ ಬಹುಮಾನ ಸಹ ಗೆಲ್ಲಬಹುದಾಗಿದೆ.
ಆದ್ದರಿಂದ, ಈ ಬಾರಿ ಗಣೇಶನನ್ನು ಪರಿಸರ ಸ್ನೇಹಿ ಹಾಗೂ ರೋಗನಿರೋಧಕ ಅರಿಶಿನ ಬಳಸಿ ತಯಾರಿಸುವ ಹಾಗೂ ಪೂಜಿಸುವ ಮೂಲಕ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಭಿಯಾನದಲ್ಲಿ ಜಿಲ್ಲೆಯ ಎಲ್ಲಾ ನಾಗರಿಕರು ಸಕ್ರಿಯರಾಗಿ ಪಾಲ್ಗೊಳ್ಳಬೇಕು. ಅಲ್ಲದೇ, ಸ್ವಯಂಸೇವಾ ಸಂಸ್ಥೆಗಳು, ಸ್ಥಳೀಯ ಸಕ್ರಿಯ ಸಂಘಸಂಸ್ಥೆಗಳು, ನಿವಾಸಿ ಸಂಘಗಳ ಪ್ರತಿನಿಧಿಗಳು ಈ ಬಾರಿ ವಿಶಿಷ್ಟ ರೀತಿಯಲ್ಲಿ ಗಣೇಶನನ್ನು ಪೂಜಿಸುವಲ್ಲಿ ಸಾರ್ವಜನಿಕರ ಮನ ಒಲಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಈ ಕುರಿತು ಹೆಚ್ಚಿನ ಸಹಕಾರಕ್ಕಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಸಾರ್ವಜನಿಕರು ಸೆ.1ರ ಬೆಳಿಗ್ಗೆ 6:00ರಿಂದ ಪ್ರಾರಂಭಿಸಿ ಸೆ.10ರ ಸಂಜೆ 6:00 ಗಂಟೆಯವರೆಗೆ ತಾವು ತಯಾರಿಸಿದ ಅರಿಶಿನ ಗಣೇಶನ ಛಾಯಾ ಚಿತ್ರಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಾಲತಾಣಗಳಾದ -kspcb.karnataka.gov.in, Youtube@kspcbkarnataka, facebook@kspcbofficial, Twitter@karnatakakspcb, Instagram: kspcb_official -ಗೆ ಕಳುಸಬಹುದು. ಹೆಚ್ಚಿನ ವಿವರಗಳಿಗೆ ಮಂಡಳಿಯ ಜಾಲತಾಣ -kspcb.karnataka.gov.in-ವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.