ಉಡುಪಿಯಲ್ಲಿ 74ನೇ ಹುಟ್ಟುಹಬ್ಬ ಆಚರಿಸಿದ ಅನಂತನಾಗ್

ಉಡುಪಿ, ಸೆ.4: ಶಿಶಿರ್ ರಾಜಮೋಹನ್ ನಿರ್ದೇಶನದ ‘ಆಬ್ರಕಡಾಬ್ರ’ ಚಿತ್ರದ ಶೂಟಿಂಗ್‌ಗಾಗಿ ಉಡುಪಿಗೆ ಆಗಮಿಸಿರುವ ಹಿರಿಯ ಚಿತ್ರನಟ ಅನಂತ ನಾಗ್ ಇಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ಪತ್ನಿ ಗಾಯತ್ರಿ ಜೊತೆ ದೇವರ ದರ್ಶನ ಪಡೆದು ತಮ್ಮ 74ನೇ ಹುಟ್ಟುಹಬ್ಬವನ್ನು ಆಚರಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಬಾಲ್ಯವನ್ನು ಎರಡು ವರ್ಷಗಳ ಕಾಲ ಉಡುಪಿಯಲ್ಲಿ ಕಳೆದಿದ್ದೆ. ನಾನು ಉಡುಪಿ ಕಿನ್ನಿಮುಲ್ಕಿಯ ಶಂಕರರಾಯರ ಮನೆಯಲ್ಲಿದ್ದೆ. ಆಗ ನನಗೆ ಆರು ವರ್ಷ. ಅಜ್ಜರಕಾಡಿನ ಸೈಂಟ್ ಸಿಸಿಲಿ ಶಾಲೆಗೆ ಎರಡು ವರ್ಷಗಳ ಹೋಗಿದ್ದೆ. ಅದು ಹೆಣ್ಣು ಮಕ್ಕಳ ಶಾಲೆಯಾಗಿದ್ದರೂ ನಾಲ್ಕನೇ ತರಗತಿವರೆಗೆ ಹುಡುಗರಿಗೂ ಅವಕಾಶ ಇತ್ತು’ ಎಂದರು.
ಹೊಸ ನಿರ್ದೇಶಕರ ಸಿನೆಮಾದಲ್ಲಿ ಹೊಸತನ, ಹೊಸ ವಿಚಾರ, ಯೋಚನೆ ಹಾಗೂ ಹೊಸ ಪ್ರಯೋಗಗಳು ಇರುತ್ತವೆ. ‘ಆಬ್ರಕಡಾಬ್ರ’ ಚಿತ್ರದ ಶೂಟಿಂಗ್ ನಾಳೆಯಿಂದ ನಡೆಯಲಿದ್ದು, ಸದ್ಯ ಉಡುಪಿಯಲ್ಲಿ 20 ದಿನಗಳ ಕಾಲ ಇರುತ್ತೇನೆ. ಅದೇ ರೀತಿ ಮೇಡ್ ಇನ್ ಬೆಂಗಳೂರು ಎಂಬ ಸಿನೆಮಾದಲ್ಲೂ ನಾನು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಅವರು ತಿಳಿಸಿದರು.
ಗಾಳಿಪಟ -2 ಸಿನೆಮಾ ಶೂಟಿಂಗ್ ಬಾಕಿ ಇದ್ದು, ಉಡುಪಿಯ ಚಿತ್ರೀಕರಣ ಕಾರ್ಯ ಮುಗಿಸಿ, ಕುದುರೆಮುಖಕ್ಕೆ ಗಾಳಿಪಟ ಶೂಟಿಂಗ್‌ನಲ್ಲಿ ತೊಡಗಿಸಿ ಕೊಳ್ಳುತ್ತೇನೆ. ಅದೇ ರೀತಿ ವಿಜಯ ಸಂಕೇಶ್ವರ ಜೀವನದ ಕುರಿತು ವಿಜಯಾನಂದ ಸಿನೆಮಾದಲ್ಲಿ ಸಂಕೇಶ್ವರರ ತಂದೆ ಪಾತ್ರವನ್ನು ನಾನು ನಿರ್ವಹಿಸುತ್ತಿದ್ದೇನೆ. ಮುಂದಿನ ತಿಂಗಳು ಇದರ ಶೂಟಿಂಗ್ ಆರಂಭಗೊಳ್ಳಲಿದೆ ಎಂದರು.
ನಾನು ರಾಜಕೀಯಕ್ಕೆ ದೇಶ ಸೇವೆ ಮಾಡುವುದಕ್ಕಾಗಿ ಜೆಪಿ ಚಳವಳಿಯ ಮೂಲಕ ಬಂದಿದ್ದೆ. ಈಗ ನಾನು ರಾಜಕಾರಣದಲ್ಲಿ ಇಲ್ಲ. ಆದರೆ ನನಗೆ ಅನಿಸಿದನ್ನು ಧೈರ್ಯವಾಗಿ ಹೇಳುತ್ತೇನೆ ಎಂದು ಅನಂತನಾಗ್ ಹೇಳಿದರು.







