ರಸ್ತೆಬದಿಯ ಗುಂಡಿಗೆ ಮಗುಚಿದ ರಿಕ್ಷಾ: ಏಳು ಮಂದಿಗೆ ಗಾಯ
ಮಂಗಳೂರು, ಸೆ.4: ತಾಲೂಕಿನ ಕೋಟೆಕಾರು ಗ್ರಾಮದಲ್ಲಿ ಸ್ಕೂಟರ್-ಆಟೊರಿಕ್ಷಾ ನಡುವಿನ ಅಪಘಾತದಿಂದಾಗಿ ರಿಕ್ಷಾವು ರಸ್ತೆಬದಿಯ ಗುಂಡಿಗೆ ಮಗುಚಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ.
ಸ್ಥಳೀಯ ನಿವಾಸಿ ಮುಹಮ್ಮದ್ ಫೈಝಲ್, ಅವರ ಪತ್ನಿ ಬುಷ್ರಾ (30), ಮಕ್ಕಳಾದ ಫಾಜಿಲ್ (10), ಫಾಹಿಮಾ (9), ಫಿದಾ (6), ಅಟೋರಿಕ್ಷಾ ಚಾಲಕ ಅಬ್ದುಲ್ ರಜಾಕ್, ಸ್ಕೂಟರ್ ಸವಾರ ಮುಹಮ್ಮದ್ ಹನೀಫ್ ಗಾಯಾಳುಗಳು ಎಂದು ತಿಳಿದುಬಂದಿದೆ.
ಮುಹಮ್ಮದ್ ಫೈಝಲ್ ಅವರು ಸೆ.3ರಂದು ಸಂಜೆ 6 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಹೆಂಡತಿಯ ಮನೆಯಾದ ಕುತ್ತಾರು ಮದನಿ ನಗರಕ್ಕೆ ರಿಕ್ಷಾದಲ್ಲಿ ತೆರಳುತ್ತಿದ್ದರು. ಕೋಟೆಕಾರು ಗ್ರಾಮದ ನಡುಕುಮೇರು ಎಂಬಲ್ಲಿಗೆ ತಲುಪಿದಾಗ ಎದುರಿನಿಂದ ಬಂದ (ನಾಟೆಕಲ್‌ನಿಂದ ಕೆ.ಸಿ. ರೋಡ್ ಕಡೆಗೆ) ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯ ಗುಂಡಿಗೆ ಮಗುಚಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ.
ಸ್ಥಳೀಯರು ಗಾಯಾಳುಗಳನ್ನು ಬೇರೊಂದು ಅಟೋ ರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ಕಣಚೂರು ಅಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





